ನಕಲಿ ಬಾಂಬ್ನೊಂದಿಗೆ ಕ್ಲೌನ್ ಮಾಸ್ಕ್ ಧರಿಸಿದ ವ್ಯಕ್ತಿಯೊಬ್ಬ ಲಾಸ್ ವೇಗಾಸ್ ವಿಮಾನ ನಿಲ್ದಾಣಕ್ಕೆ ನುಗ್ಗಿದ್ದು, ವಿಮಾನ ಹೈಜಾಕ್ ಮಾಡಲು ಪ್ರಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ.
ಮ್ಯಾಥ್ಯೂ ಹ್ಯಾನ್ಕಾಕ್ ಎಂಬ 36 ವರ್ಷದ ವ್ಯಕ್ತಿ, ಡಿಸೆಂಬರ್ 8 ರಂದು ನೆವಾಡಾದ ಲಾಸ್ ವೇಗಾಸ್ನಲ್ಲಿರುವ ಮ್ಯಾಕ್ಕಾರನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಬೇಲಿಗಳತ್ತ ತನ್ನ ವಾಹನವನ್ನು ನುಗ್ಗಿಸಿದ್ದಾರೆ. ಏಲಿಯನ್ ಗಳನ್ನು ಹುಡುಕಲು ಏರಿಯಾ 51 ರಲ್ಲಿ ವಿಮಾನವನ್ನು ಹೈಜಾಕ್ ಮಾಡಲು ಬಯಸಿದ್ದ ಎಂದು ಹೇಳಲಾಗಿದೆ.
ವರದಿ ಪ್ರಕಾರ, ಮ್ಯಾಥ್ಯೂ ಇತರ ಎರಡು ಬೇಲಿಗಳನ್ನು ಮುರಿದು ಲಾಸ್ ವೇಗಾಸ್ ವಿಮಾನ ನಿಲ್ದಾಣದ ಉತ್ತರ ಭಾಗದಲ್ಲಿ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುತ್ತಿದ್ದ ಎಂಬುದು ಗಮನಿಸಲಾಗಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಮ್ಯಾಥ್ಯೂನನ್ನು ಬಂಧಿಸಿದ್ದಾರೆ. ಈ ವೇಳೆ ಆತ ತನ್ನ ವಾಹನದಲ್ಲಿ ಶಾಟ್ಗನ್ ಮತ್ತು ಗ್ಯಾಸೋಲಿನ್ ಸಾಧನವಿದೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾನೆ.
ಬಂಧಿತ ಮ್ಯಾಥ್ಯೂ ವಾಹನವನ್ನು ಪರಿಶೀಲಿಸಿದಾಗ ಅದರಲ್ಲಿ ಒತ್ತಡದ ಮಾಪಕ, ಕ್ರಿಸ್ಮಸ್ ದೀಪಗಳು ಮತ್ತು ಇತರ ಲೋಹದ ವಸ್ತುಗಳನ್ನು ಬಾಂಬ್ನಂತೆ ಕಾಣುವಂತೆ ಜೋಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.