ಬರೋಡ ವಿರುದ್ಧ ವಿಜಯ್ ಹಜಾರೆ ಟೂರ್ನಿಯಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡವು 6 ವಿಕೆಟ್ ಗಳ ಜಯ ಗಳಿಸಿದೆ.
ಪಂದ್ಯ ಕೊನೆಯ ಘಟ್ಟಕ್ಕೆ ಬಂದು ನಿಂತ ಸಂದರ್ಭದಲ್ಲಿ ಮಳೆಯಾಗಿದ್ದರಿಂದಾಗಿ ಡಕ್ವರ್ತ್ ನಿಯಮದ ವಿ. ಜಯದೇವನ್ ಸೂತ್ರದಂತೆ ಕರ್ನಾಟಕ ತಂಡ ಗೆದ್ದು ಬೀಗಿದೆ. ಕರ್ನಾಟಕ ತಂಡ ತಾನಾಡಿದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಜಯ ಗಳಿಸಿದಂತಾಗಿದೆ.
ಟಾಸ್ ಗೆದ್ದಿದ್ದ ಕರ್ನಾಟಕ ತಂಡವು ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಹೀಗಾಗಿ ಬರೋಡ ತಂಡ ಮೊದಲು ಬ್ಯಾಟಿಂಗ್ ಗೆ ಇಳಿಯಿತು. ಆದರೆ, ಕರ್ನಾಟಕ ತಂಡದ ಬೌಲರ್ ಗಳ ಎದುರು ಬರೋಡ ಮಂಡಿಯೂರಿತು. ಬರೋಡ ತಂಡ 48.3 ಓವರ್ ಗಳನ್ನು ಎದುರಿಸಿ ಕೇವಲ 176 ರನ್ ಗಳಿಗೆ ಆಲೌಟ್ ಆಯಿತು. ಕರ್ನಾಟಕದ ಪರ ಕೆ.ಸಿ. ಕಾರ್ಯಪ್ಪ ಹಾಗೂ ವಿ.ವೈಶಾಖ್ ಉತ್ತಮ ಬೌಲಿಂಗ್ ದಾಳಿ ನಡೆಸಿ ತಲಾ 3 ವಿಕೆಟ್ ಕಬಳಿಸಿದ್ದಾರೆ.
ಈ ಸಾಧಾರಣ ಮೊತ್ತ ಬೆನ್ನಟ್ಟಿದ ಕರ್ನಾಟಕ ತಂಡವು ಕೂಡ ಉತ್ತಮ ಆರಂಭ ಪಡೆಯಲಿಲ್ಲ. ಕೇವಲ 14 ರನ್ ಗಳಿಸಿ ರೋಹನ್ ಕದಮ್ ಫೆವಲೀಯನ್ ಸೇರಿದರು. 35 ರನ್ ಗಳಿಗೆ ರವಿಕುಮಾರ್ ಸಮರ್ಥ್ ಔಟ್ ಆದರು. ನಾಯಕ ಮನೀಷ್ ಪಾಂಡೆ ಕೂಡ ಹೆಚ್ಚು ಹೊತ್ತು ನಿಲ್ಲದೆ 19 ರನ್ ಗಳಿಸಿ ಔಟ್ ಆದರು.
ಅನುಭವಿ ಆಟಗಾರ ಕರಣ್ ನಾಯರ್ ಯಾವುದೇ ರನ್ ಗಳಿಸಿದೆ ಔಟ್ ಆದರು. ಇನ್ನೊಂದೆಡೆ ಸಿದ್ದಾರ್ಥ್ ನೆಲಕಚ್ಚಿ ಬ್ಯಾಟಿಂಗ್ ಮುಂದುವರೆಸಿದ್ದರು. ಇವರಿಗೆ ಶ್ರೀನಿವಾಸ್ ಶರತ್ ಉತ್ತಮ ಸಾಥ್ ನೀಡಿದರು. ಸಿದ್ದಾರ್ಥ್ ಅಜೇಯ 46 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರೆ, ಶರತ್ 21 ರನ್ ಗಳಿಸಿ ಆಡುತ್ತಿದ್ದರು.
ಕರ್ನಾಟಕ ತಂಡ 4 ವಿಕೆಟ್ ಕಳೆದುಕೊಂಡು 150 ರನ್ ಗಳಿಸಿದ್ದಾಗ ಮಳೆ ಜೋರಾಗಿ ಸುರಿಯಲು ಆರಂಭವಾಯಿತು. ಆಗ ವಿಜೆಡಿ ನಿಯಮದಂತೆ ಕರ್ನಾಟಕ ತಂಡ 6 ವಿಕೆಟ್ ಗಳಿಂದ ಜಯ ಗಳಿಸಿದೆ ಎಂದು ಘೋಷಿಸಲಾಯಿತು.