ಕೊಯಮತ್ತೂರು: ತಮಿಳುನಾಡಿನ ತಿರುಪುರ್ ನಲ್ಲಿ ಕಾಲೇಜು ವಿದ್ಯಾರ್ಥಿನಿಗೆ ನಗ್ನಳಾಗಿ ವಿಡಿಯೋ ಕಾಲ್ ಮಾಡಲು ಇನ್ ಸ್ಟಾಗ್ರಾಂ ಸ್ನೇಹಿತ ಬೆದರಿಕೆ ಹಾಕಿದ್ದಾನೆ.
ನಗ್ನ ವಿಡಿಯೋ ಕರೆ ಮಾಡುವಂತೆ ಬ್ಲ್ಯಾಕ್ಮೇಲ್ ಮಾಡಲು ತನ್ನ ಮಾರ್ಫ್ ಮಾಡಿದ ಫೋಟೋಗಳನ್ನು ಇಂಟರ್ನೆಟ್ಗೆ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಆಕೆಯ ದೂರಿನ ಆಧಾರದ ಮೇಲೆ ಪೊಲೀಸರು ಎನ್. ನಿಯಾಜ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ.
ಕೊಯಮತ್ತೂರು ನಗರದ ನಿವಾಸಿ ನಿಯಾಜ್ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾನೆ. ನಿಯಾಜ್ ಇನ್ಸ್ಟಾಗ್ರಾಂನಲ್ಲಿ ಮಹಿಳೆಯರ ಹೆಸರು ಬಳಸಿಕೊಂಡು ಎರಡು ಖಾತೆಗಳನ್ನು ರಚಿಸಿದ್ದ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾಲೇಜು ವಿದ್ಯಾರ್ಥಿನಿಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯಂತೆ ಬಿಂಬಿಸಿ ಸ್ನೇಹ ಬೆಳೆಸಿದ್ದಾನೆ. ಕಳೆದ ಕೆಲವು ತಿಂಗಳುಗಳಿಂದ ವಿದ್ಯಾರ್ಥಿನಿ ಬೇರೆ ಹುಡುಗಿ ಇರಬೇಕೆಂದು ಭಾವಿಸಿ ಚಾಟ್ ಮಾಡುತ್ತಿದ್ದಳು.
ಆರೋಪಿ ಕಾಲೇಜು ಯುವತಿಯ ಫೋಟೋಗಳನ್ನು ಡೌನ್ಲೋಡ್ ಮಾಡಿ ಮಾರ್ಫಿಂಗ್ ಮಾಡಿದ್ದಾನೆ. ಬಳಿಕ ಆಕೆಗೆ ಅಶ್ಲೀಲ ಮಾರ್ಫ್ ಮಾಡಿದ ಚಿತ್ರಗಳನ್ನು ಕಳುಹಿಸಿ ನಗ್ನ ವಿಡಿಯೋ ಕಾಲ್ ಮಾಡುವಂತೆ ಹೇಳಿದ್ದಾನೆ. ತನ್ನ ಬೇಡಿಕೆಯನ್ನು ತಿರಸ್ಕರಿಸಿದರೆ ಆಕೆಯ ಮಾರ್ಫ್ ಮಾಡಿದ ಫೋಟೋಗಳನ್ನು ಅಂತರ್ಜಾಲದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ನಂತರ ಕಾಲೇಜು ಯುವತಿ ಸೈಬರ್ ಕ್ರೈಂ ಪೊಲೀಸರನ್ನು ಸಂಪರ್ಕಿಸಿ ಆರೋಪಿ ವಿರುದ್ಧ ದೂರು ದಾಖಲಿಸಿದ್ದಾರೆ. ಕೇಸ್ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಆತನ ಮೊಬೈಲ್ನಲ್ಲಿ ಕೆಲವು ಯುವತಿಯರೊಂದಿಗೆ ನಗ್ನ ವೀಡಿಯೊ ಕರೆಗಳ ರೆಕಾರ್ಡಿಂಗ್ಗಳನ್ನು ನಾವು ಕಂಡುಕೊಂಡಿದ್ದೇವೆ. ಎಲ್ಲಾ ಸಂತ್ರಸ್ತರು ನಿಯಾಜ್ ವಿರುದ್ಧ ದೂರು ನೀಡಲು ಮುಂದೆ ಬರುವಂತೆ ನಾವು ವಿನಂತಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.