ಕೊಪ್ಪಳ: ಶಾಲೆಗಳಲ್ಲಿ ಮೊಟ್ಟೆ ನೀಡುವುದಕ್ಕೆ ವಿರೋಧ ವಿಚಾರಕ್ಕೆ ಸಂಬಂಧಿಸಿದಂತೆ ನಾವು ಮಠಕ್ಕೆ ಬಂದು ಮೊಟ್ಟೆ ತಿನ್ನುತ್ತೇವೆ ಎಂದು ಕೊಪ್ಪಳ ಜಿಲ್ಲೆಯ ಗಂಗಾವತಿಯ ವಿದ್ಯಾರ್ಥಿನಿ ಎಚ್ಚರಿಕೆ ನೀಡಿದ್ದಾಳೆ.
ಸಂಘಟನೆಯೊಂದರ ಪ್ರತಿಭಟನೆ ವೇಳೆ ವಿದ್ಯಾರ್ಥಿನಿ ಹೇಳಿಕೆ ನೀಡಿದ್ದು, ನಾವು ಮೊಟ್ಟೆ ತಿಂದರೆ ಬದುಕುತ್ತೇವೆ. ಇಲ್ಲವಾದರೆ ಸಾಯುತ್ತೇವೆ. ನಾವು ಒಂದಲ್ಲ, ಎರಡು ಮೊಟ್ಟೆ ತಿನ್ನುತ್ತೇವೆ. ಅದನ್ನು ಕೇಳುವುದಕ್ಕೆ ನೀವು ಯಾರು ಎಂದು ವಿದ್ಯಾರ್ಥಿನಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ.
ಮೊಟ್ಟೆ ವಿತರಣೆ ನಿಲ್ಲಿಸಬೇಕೆಂದು ಕೆಲವು ಮಠಾಧೀಶರು ಸರ್ಕಾರದ ಮೇಲೆ ಒತ್ತಡ ಹೇರಿರುವುದನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿನಿ, ಶಾಲೆಯಲ್ಲಿ ಮೊಟ್ಟೆ ಕೊಡುವುದು ಬೇಡವೆಂದರೆ ಮಠಕ್ಕೆ ಬಂದು ಮೊಟ್ಟೆ ತಿನ್ನುತ್ತೇವೆ. ಅದಕ್ಕೆ ಅವಕಾಶ ನೀಡಬೇಡಿ ಎಂದು ಒತ್ತಾಯಿಸಿದ್ದಾಳೆ. ಮೊಟ್ಟೆ ಕೊಡುವ ವಿಚಾರದಲ್ಲಿ ರಾಜಕೀಯ ಮಾಡಬಾರದು. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಕೊಡುವುದು ಉತ್ತಮ ಯೋಜನೆಯಾಗಿದೆ. ಇದಕ್ಕೆ ಅಡ್ಡಿಪಡಿಸಬಾರದು ಎಂದು ಹೇಳಿದ್ದಾಳೆ. ವಿದ್ಯಾರ್ಥಿನಿಯ ಆಕ್ರೋಶದ ವಿಡಿಯೋ ವೈರಲ್ ಆಗಿದೆ.