ಬೆಂಗಳೂರು: ಬೆಳಗಾವಿ ಅಧಿವೇಶನದಲ್ಲಿ ನೂತನ ಆಸ್ತಿ ತೆರಿಗೆ ಮಿತಿ ವಿಧೇಯಕ ಮಂಡಿಸಲಿದ್ದು, ಕೈಗಾರಿಕೆ ಕಟ್ಟಡಗಳಿಗೆ ಪ್ರತ್ಯೇಕ ಆಸ್ತಿ ತೆರಿಗೆ ವಿಧಿಸುವ ಪ್ರಸ್ತಾಪವಿದೆ.
ಪ್ರಸ್ತುತ ವಾಣಿಜ್ಯ ಕಟ್ಟಡಗಳಿಗೆ ವಿಧಿಸುವ ಆಸ್ತಿ ತೆರಿಗೆಯಿಂದ ಕೈಗಾರಿಕೆಗಳನ್ನು ಪ್ರತ್ಯೇಕಗೊಳಿಸಿ ನೂತನ ಆಸ್ತಿ ತೆರಿಗೆ ಮಿತಿ ವಿಧಿಸುವ ವಿಧೇಯಕ ಕರಡು ಸಿದ್ಧವಾಗಿದ್ದು, ಬೆಳಗಾವಿ ಅಧಿವೇಶನದಲ್ಲಿ ಮಂಡನೆ ಮಾಡಲಾಗುತ್ತದೆ. ಪ್ರಸ್ತುತ ವಾಣಿಜ್ಯ ಕಟ್ಟಡಗಳಿಗೆ ಇರುವ ತೆರಿಗೆಯಲ್ಲಿ ಶೇ. 70 ರಷ್ಟು ಕೈಗಾರಿಕೆಗೆ ಸೀಮಿತಗೊಳಿಸುವ ವಿಧೇಯಕ ಇದಾಗಿದೆ ಎನ್ನಲಾಗಿದೆ
ಸಂಪುಟ ಸಭೆಯಲ್ಲಿ ಕಾಯ್ದೆಗೆ ತಿದ್ದುಪಡಿ ತಂದು ಹೊಸ ತೆರಿಗೆ ನೀತಿ ಸೇರ್ಪಡೆಗೊಳಿಸಲು ಅನುಮೋದನೆ ನೀಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತ್ಯೇಕ ತೆರಿಗೆ ವಿಧಿಸಲಾಗುತ್ತಿದೆ. ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಪಟ್ಟಣಗಳಿಗೆ ಹೊಸ ನಿಯಮ ಅನ್ವಯವಾಗಲಿದೆ.
ಸ್ಥಳೀಯ ಸಂಸ್ಥೆಗಳು ವಾಣಿಜ್ಯ ಕಟ್ಟಡಗಳಿಗೆ ಕಟ್ಟಡದ ಮೂಲ ಬೆಲೆಯ ಶೇಕಡ 0.5 ರಿಂದ ಶೇಕಡ 3 ರ ನಡುವೆ ಆಸ್ತಿ ತೆರಿಗೆಯ ವಿಧಿಸಲಿದ್ದು, ವಾಣಿಜ್ಯ ಆಸ್ತಿ ತೆರಿಗೆಯಿಂದ ಕೈಗಾರಿಕೆ ಕಟ್ಟಡಗಳನ್ನು ಬೇರೆ ಮಾಡುವುದರಿಂದ ಸರಾಸರಿ ಶೇಕಡ 0.3 ರಿಂದ ಶೇಕಡ 2 ರಷ್ಟು ಕೈಗಾರಿಕೆಗಳಿಗೆ ನಿಗದಿಯಾಗಲಿದೆ. ಇದರಿಂದ ಕೈಗಾರಿಕೆಗಳ ಉತ್ತೇಜನಕ್ಕೆ ಅನುಕೂಲವಾಗುತ್ತದೆ ಎನ್ನಲಾಗಿದೆ.