ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ 31 ವರ್ಷದ ವೈದ್ಯೆಯೊಬ್ಬರು 400 ರೂಪಾಯಿ ಮೌಲ್ಯದ ಹುಟ್ಟುಹಬ್ಬದ ಕೇಕ್ ಅನ್ನು ಆನ್ಲೈನ್ನಲ್ಲಿ ಆರ್ಡರ್ ಮಾಡಿ, 53,000 ರೂ. ಮೊತ್ತವನ್ನು ಕಳೆದುಕೊಂಡಿದ್ದಾರೆ.
ಸೈಬರ್ ವಂಚಕನೊಬ್ಬ ಬೇಕರಿಯ ಉದ್ಯೋಗಿಯಂತೆ ನಟಿಸಿ ವೈದ್ಯೆಯನ್ನು ವಂಚಿಸಿದ್ದಾನೆ. ತನ್ನ ಸ್ನೇಹಿತೆಯ ಹುಟ್ಟುಹಬ್ಬಕ್ಕಾಗಿ ಕೇಕ್ ಆರ್ಡರ್ ಮಾಡಲು ಗೂಗಲ್ ನಲ್ಲಿ ಬೇಕರಿಯ ಫೋನ್ ನಂಬರ್ ಹುಡುಕಿದ್ದಾರೆ. ಗುರ್ಗಾಂವ್ನಲ್ಲಿರುವ ಮೆರ್ವಾನ್ ಬೇಕರಿಯ ಸಂಪರ್ಕ ಸಂಖ್ಯೆಗಳನ್ನು ಹುಡುಕಿ, ಅದಕ್ಕೆ ಕಾಲ್ ಮಾಡಿದ್ದಾರೆ.
ವೈನ್ ಶಾಪ್ಗಳು, ಬೇಕರಿಗಳು, ಆನ್ಲೈನ್ ಶಾಪಿಂಗ್ ಪೋರ್ಟಲ್ಗಳು, ಬ್ಯಾಂಕ್ಗಳ ಗ್ರಾಹಕ ಸೇವಾ ಸೇವೆಗಳು, ಕೊರಿಯರ್ ಸೇವೆಗಳು ಇತ್ಯಾದಿಗಳಿಗೆ ತಮ್ಮದೇ ಆದ ನಂಬರ್ಗಳನ್ನು ವಂಚಕರು ನೀಡುತ್ತಾರೆ ಎಂಬ ಬಗ್ಗೆ ವೈದ್ಯೆಗೆ ಬಹುಶಃ ಅರಿವಿಲ್ಲ ಎಂದೆನಿಸುತ್ತದೆ.
ಆನ್ಲೈನ್ ನಲ್ಲಿ ಸಿಕ್ಕ ನಂಬರ್ಗೆ ಮಹಿಳೆ ಕರೆ ಮಾಡಿದಾಗ, ವಂಚಕನೊಬ್ಬ ಬೇಕರಿಯ ನೌಕರನಂತೆ ಸೋಗು ಹಾಕಿದ್ದಾನೆ. ಕೇಕ್ ಬುಕ್ ಮಾಡಲು 400 ರೂ. ಮುಂಗಡ ಪಾವತಿ ಮಾಡುವಂತೆ ಹೇಳಿದ್ದಾನೆ. ಅವಳು ಪಾವತಿ ಮಾಡಿದ ನಂತರ ಅವನು ರಸೀದಿಯನ್ನು ಸ್ವೀಕರಿಸಲು ಇನ್ನೂ 20 ರೂ. ಪಾವತಿಸುವಂತೆ ಹೇಳಿದ್ದಾನೆ.
ರೂ. 20 ಪಾವತಿಸಿದ ನಂತರ, ಮತ್ತೆ 15,236 ರೂ.ಗಳನ್ನು ನೋಂದಣಿ ಶುಲ್ಕವಾಗಿ ಪಾವತಿಸಲು ಕೇಳಿದ್ದಾನೆ. ಅಲ್ಲದೆ ಆ ಹಣವನ್ನು ಶೀಘ್ರದಲ್ಲೇ ಮರುಪಾವತಿ ಮಾಡಲಾಗುವುದು ಎಂದು ಹೇಳಿದ್ದಾನೆ. ಮೊದಲಿಗೆ ವೈದ್ಯೆ ಸ್ವಲ್ಪ ಹಿಂಜರಿದ್ರೂ ಆತನ ಮಾತಿಗೆ ಮರುಳಾಗಿ ವಂಚಕ ಕೇಳಿದ ಮೊತ್ತವನ್ನು ಪಾವತಿಸಿದ್ದಾರೆ. ಇದಾದ ಕೂಡಲೇ ದೋಷವಿದೆ ಎಂದು ಹೇಳಿ ಇನ್ನೂ 38,472 ರೂ. ಪಾವತಿ ಮಾಡಿ, ಮರುಪಾವತಿ ಮಾಡಲಾಗುವುದು ಎಂದು ಕೇಳಿಕೊಂಡಿದ್ದಕ್ಕೂ ವೈದ್ಯೆ ಮತ್ತೆ ಹಣವನ್ನು ಪೇ ಮಾಡಿದ್ದಾರೆ.
ಇಷ್ಟಾದ್ರೂ ಬಿಡದ ವಂಚಕ ಮತ್ತೊಂದು ಕಾರಣವನ್ನು ಉಲ್ಲೇಖಿಸಿ 50,000 ರೂ.ಗಳನ್ನು ಪಾವತಿಸುವಂತೆ ಕೇಳಿದ್ದಾನೆ. ಈ ವೇಳೆ ಆಕೆಗೆ ತಾನು ವಂಚನೆಗೊಳಗಾದ ಬಗ್ಗೆ ಅರಿವಾಗಿ ಕೂಡಲೇ ಕರೆಯನ್ನು ಕಟ್ ಮಾಡಿದ್ದಾರೆ. ತಕ್ಷಣ ವಹಿವಾಟಿನ ಬಗ್ಗೆ ತನ್ನ ಬ್ಯಾಂಕ್ಗೆ ಎಚ್ಚರಿಕೆ ನೀಡಿದ ಆಕೆ, ನಂತರ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.