ಪ್ರಮುಖವಾಗಿ ಕಡಿಮೆ ಆಮದು ಸುಂಕದ ಹಿನ್ನೆಲೆಯಲ್ಲಿ ಕಳೆದ ತಿಂಗಳಲ್ಲಿ ಖಾದ್ಯ ತೈಲ ಬೆಲೆಗಳು ಪ್ರತಿ ಕೆಜಿಗೆ 8-10 ರೂ.ನಷ್ಟು ಕಡಿಮೆಯಾಗಿದೆ.
ಮುಂಬರುವ ತಿಂಗಳುಗಳಲ್ಲಿ ತೈಲಬೀಜಗಳ ಹೆಚ್ಚಿನ ದೇಶೀಯ ಉತ್ಪಾದನೆ ಮತ್ತು ಇತರೆ ಕಾರಣಗಳಿಂದಾಗಿ 3-4 ರೂ.ನಷ್ಟು ಇಳಿಯಬಹುದು. ಕಳೆದ ಕೆಲವು ತಿಂಗಳು ತಾಳೆ, ಸೋಯಾ ಮತ್ತು ಸೂರ್ಯಕಾಂತಿ ಸೇರಿ ಎಲ್ಲಾ ಖಾದ್ಯ ತೈಲಗಳ ಏರಿಕೆಯಾಗಿತ್ತು. ಅಂತರಾಷ್ಟ್ರೀಯ ಬೆಲೆಗಳ ಕಾರಣದಿಂದಾಗಿ ಭಾರತೀಯ ಖಾದ್ಯ ತೈಲ ಗ್ರಾಹಕರು ಹೆಚ್ಚಾಗಿ ತೊಂದರೆ ಗೀಡಾಗಿದ್ದಾರೆ ಎಂದು ಸಾಲ್ವೆಂಟ್ ಎಕ್ಸ್ ಟ್ರಾಕ್ಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ(ಎಸ್ಇಎ) ಅಧ್ಯಕ್ಷ ಅತುಲ್ ಚತುರ್ವೇದಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
SEA ತನ್ನ ಸದಸ್ಯರಿಗೆ ದೀಪಾವಳಿಯ ಮೊದಲು ಬೆಲೆಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಲು ಸಲಹೆ ನೀಡಿತ್ತು, ಕೇಂದ್ರವು ಖಾದ್ಯ ತೈಲಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಿತ್ತು. ಈ ಎಲ್ಲಾ ಕ್ರಮಗಳ ಪರಿಣಾಮವಾಗಿ ಕಳೆದ 30 ದಿನಗಳಲ್ಲಿ ಖಾದ್ಯ ತೈಲ ಬೆಲೆಗಳು ಕೆಜಿಗೆ ಸುಮಾರು 8-10 ರೂ.ಗಳಷ್ಟು ಕಡಿಮೆಯಾಗಿದೆ ಎಂದು ಚತುರ್ವೇದಿ ಹೇಳಿದ್ದಾರೆ.
ಕಡಿಮೆ ಬೆಲೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವಲ್ಲಿ ಸದಸ್ಯರು ತಕ್ಷಣವೇ ಪ್ರತಿಕ್ರಿಯಿಸುತ್ತಿದ್ದಾರೆ ಎಂದು SEA ಹೇಳಿದೆ. ಮುಂದೆ ಪ್ರತಿ ಖಾದ್ಯ ತೈಲ ದರ ಕೆಜಿಗೆ ಸುಮಾರು 3-4 ರೂಪಾಯಿಗಳಷ್ಟು ಕಡಿಮೆಯಾಗಲಿದೆ. ಇದರಿಂದ ಖಾದ್ಯ ತೈಲ ಗ್ರಾಹಕರಿಗೆ ಅನುಕೂಲವಾಗಲಿದೆ.