
ದಾವಣಗೆರೆ: ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ನಲ್ಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕನ ತಲೆಮೇಲೆ ಡಸ್ಟ್ ಬಿನ್ ಹಾಕಿ ಪುಂಡಾಟಿಕೆ ನಡೆಸಿದ್ದ ವಿದ್ಯಾರ್ಥಿಗಳು ಶಿಕ್ಷಕನ ಕಾಲಿಗೆ ಬಿದ್ದು ಕ್ಷಮೆ ಕೋರಿದ್ದಾರೆ.
ಡಸ್ಟ್ ಬಿನ್ ನಲ್ಲಿದ್ದ ಕಸವನ್ನು ಹೊರಕ್ಕೆ ಹಾಕುವಂತೆ ಶಿಕ್ಷಕರು ತಿಳಿಸಿದ್ದರಿಂದ ವಿದ್ಯಾರ್ಥಿಗಳು ಪುಂಡಾಟಿಕೆ ಮೆರೆದಿದ್ದರು. ಶಿಕ್ಷಕನ ಅಂಗಿ ಎಳೆದಿದ್ದಲ್ಲದೆ, ಡಸ್ಟ್ ಬಿನ್ ಬಕೆಟ್ ಅನ್ನು ಅವರ ತಲೆಮೇಲೆ ಹಾಕಿ ಅನುಚಿತವಾಗಿ ವರ್ತಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಲೇ ತೀವ್ರ ಆಕ್ರೋಶ ವ್ಯಕ್ತವಾಗಿತತ್ಉ.
ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮದ ಮುಖಂಡರು ಸಭೆ ನಡೆಸಿದ್ದರು. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅವರನ್ನು ಶಾಲೆಯಿಂದ ಉಚ್ಚಾಟನೆ ಮಾಡಬಾರದು ಎಂದು ಪೋಷಕರು ಮನವಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೂ ದೂರು ನೀಡಲಾಗಿದೆ. ಇಂದು ಶಾಲೆಗೆ ಆಗಮಿಸಿದ್ದ 10ನೇ ತರಗತಿ ವಿಭಾಗದ ವಿದ್ಯಾರ್ಥಿಗಳು ಶಿಕ್ಷಕರ ಕಾಲಿಗೆ ಬಿದ್ದು ಕ್ಷಮೆ ಕೋರಿದ್ದಾರೆ.
ಶಾಲೆ ದೇವಾಲಯವಿದ್ದಂತೆ. ಇಂತಹ ಸ್ಥಳದಲ್ಲಿ ಗುಟ್ಕಾ ತರಬೇಡಿ ಎಂದು ಹೇಳಿದ್ದಕ್ಕೆ ವಿದ್ಯಾರ್ಥಿಗಳು ಪುಂಡಾಟಿಕೆ ತೋರಿದ್ದರು. ಆದರೆ, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅವರ ಬಗ್ಗೆ ಎಲ್ಲಿಯೂ ಹೇಳಿರಲಿಲ್ಲ. ಈಗ ಅವರ ತಪ್ಪನ್ನು ಕ್ಷಮಿಸಿದ್ದೇನೆ. ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು ಎಂದು ಶಿಕ್ಷಕ ಪ್ರಕಾಶ್ ಹೇಳಿದ್ದಾರೆ.