ಮಂಡ್ಯ: ಶಾಲೆಗಳಲ್ಲಿ ಮೊಟ್ಟೆ ಯೋಜನೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಮಕ್ಕಳಿಗೆ ಮೊಟ್ಟೆ ತಿನ್ನಲೇಬೇಕು ಎಂದು ಸರ್ಕಾರ ಒತ್ತಡ ಹೇರುತ್ತಿಲ್ಲ. ಮಕ್ಕಳಿಗೆ ಬಾಳೆಹಣ್ಣನ್ನು ಕೂಡ ಕೊಡುತ್ತಿದ್ದೇವೆ ಎಂದು ತಿಳಿಸಿದರು.
ಶಾಲಾ ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಹಾಗಾಗಿ ಪ್ರೋಟಿನ್ ಯುಕ್ತ ಆಹಾರ ನೀಡಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ. ಹಾಗಾಗಿ ಪ್ರೋಟಿನ್ ಪದಾರ್ಥಗಳನ್ನು ಆಯ್ಕೆ ಮಾಡಿದ್ದೇವೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಮೊಟ್ಟೆ ಜೊತೆ ಬಾಳೆ ಹಣ್ಣನ್ನು ಕೊಡುತ್ತೇವೆ. ಮೊಟ್ಟೆ ತಿನ್ನಲೇಬೇಕು ಎಂದು ಮಕ್ಕಳ ಮೇಲೆ ಒತ್ತಡ ಹೇರಲ್ಲ ಎಂದರು.
15 ಸಾವಿರ ಶಿಕ್ಷಕರ ನೇಮಕಾತಿಗೆ ಶೀಘ್ರದಲ್ಲೇ ಆದೇಶ ಹೊರಡಿಸಲಾಗುತ್ತಿದೆ. ಹಲವು ವರ್ಷಗಳಿಂದ ರಾಜ್ಯದಲ್ಲಿ ಶಿಕ್ಷಕರ ಕೊರತೆಯಿದೆ. ಹೀಗಾಗಿ ಕೆಲವೇ ದಿನಗಳಲ್ಲಿ ನೋಟಿಫಿಕೇಷನ್ ಮಾಡಲಾಗುತ್ತದೆ ಎಂದು ತಿಳಿಸಿದರು.
ಇನ್ನು ಕೋವಿಡ್ ನಿಂದ ಶಾಲೆಗಳನ್ನು ಬಂದ್ ಮಾಡುವ ಗಂಭೀರ ಸ್ಥಿತಿ ಬಂದಿಲ್ಲ. 1 ಕೋಟಿ 20 ಲಕ್ಷ ಮಕ್ಕಳಿಗೆ ಮಾತ್ರ ಸೋಂಕು ಕಾಣಿಸಿಕೊಂಡಿದೆ. ಎಲ್ಲ ಮಕ್ಕಳು ಸುರಕ್ಷಿತವಾಗಿದ್ದಾರೆ. ಸರ್ಕಾರದಿಂದಲು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.