ಬೆಂಗಳೂರು: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿ ವಿಚಾರ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಡಿಸೆಂಬರ್ 13ರಿಂದ ಬೆಳಗಾವಿಯಲ್ಲಿ ಆರಂಭವಾಗಲಿರುವ ಚಳಿಗಾಲದ ಅಧಿವೇಶನಲ್ಲಿ ನಡೆಯಲಿರುವ ಮಸೂದೆ ಮಂಡನೆಗೆ ಸರ್ಕಾರ ಚಿಂತನೆ ನಡೆಸಿದ್ದು, ಪರ ವಿರೋಧಗಳು ವ್ಯಕ್ತವಾಗುತ್ತಿವೆ.
ಮತಾಂತರ ನಿಷೇಧ ಕಾಯ್ದೆ ಮಂಡನೆಗೆ ಎಂ ಎಲ್ ಸಿ ತುಳಸಿ ಮುನಿರಾಜುಗೌಡ ಮುಂದಾಗಿದ್ದಾರೆ. ಬಿಜೆಪಿ ನಾಯಕರು, ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸೇರಿದಂತೆ ಹಲವರು ಮತಾಂತರ ನಿಷೇಧ ಕಾಯ್ದೆ ಜಾರಿಗೆ ಒತ್ತಾಯಿಸಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ಬಿ.ವೈ. ರಾಘವೇಂದ್ರ, ಬಲಾತ್ಕಾರದ ಮತಾಂತರದ ಬಗ್ಗೆ ಕೇಳಿಬರುತ್ತಿದ್ದು, ಬಲವಂತದ ಮತಾಂತರಕ್ಕೆ ಅವಕಾಶವಿಲ್ಲ, ಚಳಿಗಾಲದ ಅಧಿವೇಶನದಲ್ಲಿ ಕಾಯ್ದೆ ಬಗ್ಗೆ ಚರ್ಚೆಯಾಗಬಹುದು. ಕೆಲ ತಿದ್ದುಪಡಿಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿಸಿದ್ದಾರೆ.
ವಿಜಯ್ ಹಜಾರೆ ಟೂರ್ನಿಯಲ್ಲಿ ಹ್ಯಾಟ್ರಿಕ್ ಶತಕ ಸಿಡಿಸಿದ ರುತುರಾಜ್!
ಇನ್ನು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಮತಾಂತರ ನಿಷೇಧ ಕಾಯ್ದೆ ಮಸೂದೆ ಮಂಡನೆ ಮಾಡುವುದು ಖಚಿತ. ಚರ್ಚೆ ಪೂರ್ಣವಾದರೆ ಈ ಬಾರಿಯೇ ಕಾಯ್ದೆ ಮಂಡನೆಯಾಗಬಹುದು ಎಂದಿದ್ದಾರೆ.
ಆದರೆ ಮತಾಂತರ ನಿಷೇಧ ಕಾಯ್ದೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಡಿ.ಕೆ.ಶಿವಕುಮಾರ್, ಒಂದೊಂದು ಸಮುದಾಯಗಳನ್ನು ಟಾರ್ಗೆಟ್ ಮಾಡಿ ಹಿಂಸೆ ನೀಡಲಾಗುತ್ತಿದೆ. ಇದು ರಾಜ್ಯಕ್ಕೆ ಮಾತ್ರ ಸಂಬಂಧಿಸಿದ ವಿಚಾರವಲ್ಲ, ಅಂತರಾಷ್ಟ್ರೀಯ ವಿಷಯ. ಸರ್ಕಾರದ ಇಂಥಹ ಉದ್ದೇಶ ಸರಿಯಲ್ಲ ಎಂದು ಹೇಳಿದ್ದಾರೆ.
ಈ ನಡುವೆ ಕ್ರಿಶ್ಚಿಯನ್ ನಿಯೋಗ ಇಂದು ಸಿಎಂ ಬಸವರಾಜ್ ಬೊಮ್ಮಾಯಿ ಭೇಟಿಯಾಗಿ ರಾಜ್ಯದಲ್ಲಿ ಕ್ರೈಸ್ತರು ಎದುರಿಸುತ್ತಿರುವ ಸಮಸ್ಯೆ ಪರಿಹಾರ ಹಾಗೂ ಮತಾಂತರ ನಿಷೇಧ ಕಾಯ್ದೆ ಜಾರಿ ಬಗ್ಗೆ ಪಾರಾಮರ್ಶಿಸಲು ಮನವಿ ಮಾಡಿದೆ.