ಸಶಸ್ತ್ರ ಪಡೆಗಳ ಸಿಬ್ಬಂದಿಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ರ ದುರ್ಮರಣಕ್ಕೆ ಕಾರಣವಾದ ಹೆಲಿಕಾಪ್ಟರ್ ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿಯಾದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಬರೆದಿದ್ದ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಗಸ್ಟ್ನಲ್ಲಿ ಶೌರ್ಯ ಚಕ್ರ ಗೌರವಕ್ಕೆ ಭಾಜರಾದ ಬಳಿಕ ಸೆಪ್ಟೆಂಬರ್ 18, 2021ರ ದಿನಾಂಕದಂದು ವರುಣ್ ಸಿಂಗ್ ತಾವು ಒಂದಷ್ಟು ದಿನ ಓದಿದ ಶಾಲೆಯಾದ ಆರ್ಮಿ ಪಬ್ಲಿಕ್ ಶಾಲೆ, ಚಂಡಿಮಂದಿರ್, ಹರಿಯಾಣಾದ ಪ್ರಾಂಶುಪಾಲರಿಗೆ ಪತ್ರ ಬರೆದಿದ್ದಾರೆ. ತಮ್ಮ ಪತ್ರವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಲು ಸಿಂಗ್ ಮನವಿ ಮಾಡಿಕೊಂಡಿದ್ದರು.
“ನಾನು ಈ ಶಾಲೆಯಲ್ಲಿ 2000ನೇ ಇಸವಿ ಬ್ಯಾಚ್ನ ವಿದ್ಯಾರ್ಥಿಯಾಗಿದ್ದು, ವಿಂಗ್ ಕಮಾಂಡರ್ ಅವತಾರ್ ಸಿಂಗ್ (ನಿವೃತ್ತ) ಆ ಅವಧಿಯಲ್ಲಿ ಪ್ರಾಂಶುಪಾಲರಾಗಿದ್ದರು. ಸದ್ಯದ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಸಿಂಗ್ ನಮ್ಮ ಇಂಗ್ಲಿಷ್ ಶಿಕ್ಷಕಿಯಾಗಿದ್ದರು. ಶಾಲಾ ವಿದ್ಯಾಭ್ಯಾಸ ಮುಗಿಯುತ್ತಲೇ ಎನ್ಡಿಎಗೆ ಆಯ್ಕೆಯಾದ ನಾನು ಅಲ್ಲಿಂದ ವಾಯುಪಡೆಯಲ್ಲಿ ಹಾರುವ ವಿಭಾಗದ, ಫೈಟರ್ ಸ್ಟ್ರೀಮ್ ಸೇರಿಕೊಂಡೆ,” ಎಂದು ತಮ್ಮ ಹಾಗೂ ಶಾಲೆಯ ನಡುವಿನ ಸಂಬಂಧದ ಪರಿಚಯ ಕೊಟ್ಟಿರುವ ಸಿಂಗ್ ಹೀಗೇ ಮುಂದುವರೆದು:
“ಹೆಮ್ಮೆಯಿಂದ ನಾನು ನಿಮಗೆ ಬರೆಯುತ್ತಿದ್ದೇನೆ. ಅಕ್ಟೋಬರ್ 12, 2020ರಂದು ನಾನು ತೋರಿದ ಪರಾಕ್ರಮನ್ನು ಮೆಚ್ಚಿ ಭಾರತದ ರಾಷ್ಟ್ರಪತಿ ಈ ವರ್ಷದ ಆಗಸ್ಟ್ 15ರಂದು ನನಗೆ ಶೌರ್ಯ ಚಕ್ರ ಪ್ರಶಸ್ತಿ ನೀಡಿದ್ದಾರೆ. ಈ ಪ್ರತಿಷ್ಠಿತ ಗೌರವವನ್ನು ನಾನು ನನ್ನ ಶಾಲೆಯಲ್ಲಿ, ಇದಾದ ಬಳಿಕ ಎನ್ಡಿಎನಲ್ಲಿ ಹಾಗೂ ವಾಯುಪಡೆಯಲ್ಲಿ ಯಾರೆಲ್ಲರೊಂದಿಗೂ ಸಂಬಂಧಿತನಾಗಿದ್ದೇನೋ ಅವರೆಲ್ಲರಿಗೂ ಅರ್ಪಿಸುತ್ತೇನೆ. ಆ ದಿನದಂದು ನಾನು ಮಾಡಿದ ಕೆಲಸವು ವರ್ಷಗಳಿಂದ ನನ್ನ ಶಿಕ್ಷಕರು, ಬೋಧಕರು ಹಾಗೂ ಸಹವರ್ತಿಗಳ ಪ್ರೇರಣೆಯಿಂದ ಆಗಿರುವಂಥದ್ದು ಎಂದು ನಾನು ಬಲವಾಗಿ ನಂಬಿದ್ದೇನೆ.
BIG NEWS: ಒಮಿಕ್ರಾನ್ ಹೆಚ್ಚಳ ನಡುವೆ ಕೋವಿಡ್ ಸೋಂಕಿತರ ಸಂಖ್ಯೆ ಕುಸಿತ
ನನ್ನ ಜೀವನದ ಕೆಲವೊಂದು ಆಲೋಚನೆಗಳನ್ನು ಹಂಚಿಕೊಳ್ಳಲು ನಾನು ಬರೆದಿದ್ದು, ಇಂದಿನ ಅತಿಯಾದ ಸ್ಫರ್ಧಾತ್ಮಕ ಯುಗದಲ್ಲಿ ತಾವು ತೀರಾ ಅಶಕ್ತರು ಎಂದು ಭಾವಿಸುವ ವಿದ್ಯಾರ್ಥಿಗಳೊಂದಿಗೆ ನನ್ನ ಕೆಲವೊಂದು ಆಲೋಚನೆಗಳನ್ನು ಹೊಂಚಿಕೊಳ್ಳಲೆಂದು ನಾನು ಬರೆದಿದ್ದೇನೆ,” ಎಂದಿರುವ ಸಿಂಗ್, ಶಾಲಾ ದಿನಗಳಲ್ಲಿ ತಮ್ಮನ್ನು ತಾವು ಸರಾಸರಿ ವಿದ್ಯಾರ್ಥಿ ಎಂದು ಭಾವಿಸಿ ಆತ್ಮವಿಶ್ವಾಸದ ಕೊರತೆ ಎದುರಿಸುತ್ತಿದ್ದ ತಮ್ಮನ್ನು ತಮ್ಮ ಶಿಕ್ಷಕರು ಹೇಗೆ ರೂಪಿಸಿದರು ಎಂದು ಹೇಳಿಕೊಂಡಿದ್ದಾರೆ.
ತಮ್ಮ ಮನಸ್ಸು ಹಾಗೂ ಹೃದಯಗಳನ್ನು ಒರೆಗೆ ಹಚ್ಚಿ ಮಾಡಿದ ಪ್ರಯತ್ನಗಳ ಫಲವಾಗಿಯೇ ತಾವು ಫ್ಲೈಟ್ ಲೆಫ್ಟೆನೆಂಟ್ ಆಗಿ ಬರುವಂತಾಯಿತು ಎಂದು ಹೇಳಿಕೊಂಡಿರುವ ಸಿಂಗ್, “ಸರಾಸರಿಯಾಗಿರುವುದು ಓಕೆ. ಶಾಲೆಯಲ್ಲಿ ಪ್ರತಿಯೊಬ್ಬರೂ 90ರಲ್ಲಿ ಅಂಕಗಳಿಸಲು ಸಾಧ್ಯವಿಲ್ಲ. ನೀವು ಹಾಗೆ ಮಾಡಿದರೆ ಅದು ಅದ್ಭುತ ಸಾಧನೆ ಹಾಗೂ ಶ್ಲಾಘನೀಯ. ಆದರೆ ನಿಮಗೆ ಅದು ಆಗದೇ ಇದ್ದಲ್ಲಿ, ನೀವು ಸಾಮಾನ್ಯರೆಂದು ಭಾವಿಸಬೇಡಿ,” ಎಂದಿದ್ದಾರೆ.
“ಶಾಲೆಯಲ್ಲಿ ನೀವು ಸಾಮಾನ್ಯ ವಿದ್ಯಾರ್ಥಿ ಎಂದ ಮಾತ್ರಕ್ಕೆ ಜೀವನದಲ್ಲಿ ಮುಂದೆ ಏನೆಲ್ಲಾ ಆಗಬಹುದು ಎಂಬ ಅಂದಾಜು ಇದಾಗುವುದಿಲ್ಲ. ಕಲೆ, ಸಂಗೀತ, ಗ್ರಾಫಿಕ್ ವಿನ್ಯಾಸ, ಸಾಹಿತ್ಯ ಇತ್ಯಾದಿ….. ಅದೇನೇ ಆಗಿರಲಿ ನಿಮ್ಮ ಇಚ್ಛೆಯನ್ನು ಕಂಡುಕೊಳ್ಳಿ. ನೀವು ಯಾವುದರ ಮೇಲೆ ಕೆಲಸ ಮಾಡಿದರೂ ಸಹ ಬದ್ಧತೆಯೊಂದಿಗೆ ನಿಮ್ಮ ಶ್ರೇಷ್ಠವಾದ ಪ್ರಯತ್ನ ನೀಡಿ. ನಾನು ಇನ್ನಷ್ಟು ಒಳ್ಳೆಯ ಯತ್ನ ಮಾಡಬಹುದಿತ್ತು ಎಂದುಕೊಂಡು ಹಾಸಿಗೆಗೆ ಎಂದೂ ಹೋಗಬೇಡಿ,” ಎಂದಿದ್ದಾರೆ.
“ಯಾವತ್ತೂ ಭರವಸೆ ಕಳೆದುಕೊಳ್ಳಬೇಡಿ. ನೀವೇನಾಗಬೇಕೋ ಅದರಲ್ಲಿ ನೀವು ಉತ್ತಮವಾಗಿಲ್ಲ ಎಂದು ಯಾವತ್ತೂ ಅಂದುಕೊಳ್ಳಬೇಡಿ. ಯಾವುದೂ ಸುಲಭದಲ್ಲಿ ಬರೋದಿಲ್ಲ. ಸಮಯ, ತ್ಯಾಗಗಳು ಹಾಗೂ ಪ್ರಯತ್ನಗಳು ಬೇಕಾಗುತ್ತವೆ. ನಾನು ಒಂದು ಕಾಲದಲ್ಲಿ ಸರಾಸರಿಯೇ ಆಗಿದ್ದವನು ಇಂದು ನನ್ನ ವೃತ್ತಿಯಲ್ಲಿ ಕೆಲವೊಂದು ಕಠಿಣ ಮೈಲುಗಲ್ಲುಗಳನ್ನು ಸಾಧಿಸಿದ್ದೇನೆ. 12ನೇ ತರಗತಿಯ ಮಂಡಳಿ ಪರೀಕ್ಷೆಗಳು ಜೀವನಲ್ಲಿ ನೀವು ಏನೆಲ್ಲಾ ಸಾಧಿಸಬಲ್ಲಿರೋ ಅದನ್ನು ನಿರ್ಧರಿಸುತ್ತವೆ ಎಂದು ಭಾವಿಸಬೇಡಿ, ನಿಮ್ಮಲ್ಲಿ ನೀವು ನಂಬಿಕೆ ಇಡಿ, ಅದರತ್ತ ಕೆಲಸ ಮಾಡಿ,” ಎಂದು ಸಿಂಗ್ ಅರ್ಥಪೂರ್ಣವಾದ ಸಂದೇಶವೊಂದರಲ್ಲಿ ತಮ್ಮ ಕಿರಿಯರನ್ನು ಪ್ರೇರೇಪಿಸುವ ಕೆಲಸ ಮಾಡಿದ್ದಾರೆ.
ತಾವು ಹಾರಿಸುತ್ತಿದ್ದ ತೇಜಸ್ ವಿಮಾನವೊಂದನ್ನು ಆಗಸದಲ್ಲೇ ಅಪಘಾತಕ್ಕೀಡಾಗುವ ಸಾಧ್ಯತೆಯನ್ನು ತಪ್ಪಿಸಿದ ಸಾಹಸಕ್ಕೆ ಸಿಂಗ್ ಅವರಿಗೆ ಶೌರ್ಯ ಚಕ್ರ ಗೌರವ ನೀಡಲಾಗಿದೆ.
2019ರಲ್ಲಿ ಇಸ್ರೋನ ಗಗನಯಾನ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದ ಅಂತಿಮ 12ರ ಬಳಗದಲ್ಲಿ ಆಯ್ಕೆಯಾಗಿದ್ದ ವರುಣ್, ಅಲ್ಲಿಂದ ಆಚೆಗೆ ಅಂತಿಮ ಪಟ್ಟಿಯಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅದರ ಮುಂದಿನ ವರ್ಷದಲ್ಲಿ, ತೇಜಸ್ ಯುದ್ಧವಿಮಾನವೊಂದನ್ನು ಹಾರಿಸುತ್ತಿದ್ದ ವೇಳೆ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಅಪಾಯದ ಪರಿಸ್ಥಿತಿ ನಿರ್ಮಾಣವಾದ ಬೆನ್ನಿಗೇ, ಎಸ್ಓಪಿ ಪ್ರಕಾರ ವಿಮಾನದಿಂದ ಎಜೆಕ್ಟ್ ಆಗುವ ಬದಲಿಗೆ, ಆ ಗಾಬರಿಯ ವೇಳೆಯಲ್ಲೂ ಲೆಕ್ಕಾಚಾರದ ನಡೆಗಳನ್ನು ಇಟ್ಟ ಸಿಂಗ್, ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಲ್ಲದೇ, ತಮ್ಮ ಹಾಗೂ ನಾಗರಿಕರ ಜೀವಗಳನ್ನು ಉಳಿಸಿದ್ದಾರೆ.