ದಾವಣಗೆರೆ: ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ನಲ್ಲೂರು ಗ್ರಾಮದಲ್ಲಿ ಹಿರಿಯ ಶಿಕ್ಷಕರೊಬ್ಬರ ತಲೆ ಮೇಲೆ ಡಸ್ಟ್ ಬಿನ್ ಬಕೆಟ್ ಹಾಕಿ ಪುಂಡಾಟಿಕೆ ಮೆರೆದಿದ್ದ ವಿದ್ಯಾರ್ಥಿಗಳಿಗೆ ಗೇಟ್ ಪಾಸ್ ನೀಡಲಾಗಿದೆ.
ಡಿಸೆಂಬರ್ 3 ರಂದು ಹಿರಿಯರಾದ ಹಿಂದಿ ಶಿಕ್ಷಕರ ಮೇಲೆ 10 ನೇ ತರಗತಿಯ ವಿದ್ಯಾರ್ಥಿಗಳು ಪುಂಡಾಟಿಕೆ ಮೆರೆದು ತಲೆಮೇಲೆ ಬಕೆಟ್ ಹಾಕಿ ಹೊಡೆದಿದ್ದಾರೆ. ತರಗತಿಗೆ ಪಾಠ ಮಾಡಲು ಬಂದಿದ್ದ ಹಿಂದಿ ಶಿಕ್ಷಕರು ಡಸ್ಟ್ ಬಿನ್ ನಲ್ಲಿ ಇದ್ದ ಕಸವನ್ನು ಹೊರಗೆ ಹಾಕುವಂತೆ ಹೇಳಿದ್ದಾರೆ. ಈ ವೇಳೆ ಕಸವನ್ನು ಹೊರಗೆ ಹಾಕಿ ಬಂದ ವಿದ್ಯಾರ್ಥಿಗಳಾದ ಆಕಾಶ್, ತರುಣ್, ಸಂದೀಪ್, ರಂಗನಾಥ್, ಉಜೇರ್ ಎಂಬುವರು ಖಾಲಿ ಬಕೆಟ್ ಅನ್ನು ಶಿಕ್ಷಕನ ತಲೆ ಮೇಲೆ ಹಾಕಿ ತಲೆಗೆ ಹೊಡೆದು ಗಲಾಟೆ ಮಾಡಿದ್ದಾರೆ. ತರಗತಿಯಲ್ಲಿದ್ದ ಬೇರೆ ವಿದ್ಯಾರ್ಥಿಗಳು ಇದನ್ನು ವಿಡಿಯೋ ಮಾಡಿಕೊಂಡಿದ್ದಾರೆ.
ಒಳ್ಳೆಯ ಮನಸಿನವರಾದ ಹಿರಿಯ ಶಿಕ್ಷಕರು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಈ ವಿಷಯವನ್ನು ಯಾರಿಗೂ ಹೇಳಿರಲಿಲ್ಲ. ಆದರೆ, ಕಿಡಿಗೇಡಿ ವಿದ್ಯಾರ್ಥಿಗಳೇ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಅದು ವೈರಲ್ ಆಗಿದೆ. ವಿದ್ಯಾರ್ಥಿಗಳ ದುರ್ನಡತೆ ಬಗ್ಗೆ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಊರಿನ ಮುಖಂಡರು, ಅಧಿಕಾರಿಗಳು, ಶಿಕ್ಷಕರು ಸೇರಿದಂತೆ ಎಲ್ಲರೂ ಕೂಡ ವಿದ್ಯಾರ್ಥಿಗಳ ಇಂತಹ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಚನ್ನಗಿರಿ ಠಾಣೆ ಪೊಲೀಸರು ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳ ವಿರುದ್ಧ ಕ್ರಮಕ್ಕೆ ತೀವ್ರ ಒತ್ತಡ ಕೇಳಿಬಂದಿದ್ದು, ಅವರೆಲ್ಲರಿಗೂ ಟಿಸಿ ಕೊಟ್ಟು ಕಳುಹಿಸಲಾಗಿದೆ ಎಂದು ಹೇಳಲಾಗಿದೆ.