ಮದ್ರಾಸ್ ಹೈಕೋರ್ಟ್ನ ಆದೇಶದಂತೆ ತಮಿಳುನಾಡು ಮಾಜಿ ಸಿಎಂ ದಿವಂಗತ ಜೆ. ಜಯಲಲಿತಾ ಅವರ ಪೋಯಸ್ ಗಾರ್ಡನ್ ನಿವಾಸದ ಕೀಗಳನ್ನು ಜಯಲಲಿತಾ ಸೊಸೆ ದೀಪಾ ಹಾಗೂ ಅಳಿಯ ದೀಪಕ್ ಜಯರಾಂಗೆ ಹಸ್ತಾಂತರಿಸಲಾಗಿದೆ.
ಜಯಲಲಿತಾರ ಪೋಯಸ್ ಗಾರ್ಡನ್ ನಿವಾಸವನ್ನು ಸ್ಮಾರಕವನ್ನಾಗಿ ನಿರ್ಮಿಸುವ ಅಂದಿನ ಎಐಎಡಿಂಕೆ ಸರ್ಕಾರದ ನಿರ್ಧಾರವನ್ನು ನವೆಂಬರ್ 24ರಂದು ರದ್ದುಗೊಳಿಸಿದ್ದ ಮದ್ರಾಸ್ ಹೈಕೋರ್ಟ್ ಪೋಯಸ್ ಗಾರ್ಡನ್ ನಿವಾಸ ಜಯಲಲಿತಾರ ಸಂಬಂಧಿಗಳಿಗೆ ಸೇರಿದ್ದು ಎಂದು ಹೇಳಿತ್ತು.
ಜಯಲಲಿತಾರ ಏಕೈಕ ಸಹೋದರ ಜಯಕುಮಾರ್ ಮಕ್ಕಳಾದ ದೀಪಾ ಹಾಗೂ ದೀಪಕ್ ಜಯರಾಂ ವೇದ ನಿಲಯಂ ವಿಚಾರವಾಗಿ ಅಂದಿನ ಎಐಎಡಿಎಂಕೆ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಜಯಲಲಿತಾ ನೆಲೆಸಿದ್ದ ನಿವಾಸವನ್ನು ತನ್ನ ಸುಪರ್ದಿಗೆ ಪಡೆದಿದ್ದ ಎಐಎಡಿಂಕೆ, ತಮಿಳುನಾಡು ವಿಧಾನಸಭೆ ಚುನಾವಣೆಗೂ ಮುನ್ನ ಅಂದರೆ ಈ ವರ್ಷದಲ್ಲಿಯೇ ವೇದ ನಿಲಯಂನ್ನು ಸ್ಮಾರಕವನ್ನಾಗಿ ಪರಿವರ್ತಿಸಲು ಮುಂದಾಗಿತ್ತು.
ಆದರೆ ಮದ್ರಾಸ್ ಹೈಕೋರ್ಟ್ನ ಈ ನಿರ್ಧಾರವು ಬಂಗಲೆಯನ್ನು ಸ್ವಾಧೀನಪಡಿಸಿಕೊಳ್ಳಲು ಆದೇಶ ನೀಡಿದ್ದ ಅಂದಿನ ತಮಿಳುನಾಡು ಸಿಎಂ ಎಡಪ್ಪಳ್ಳಿ ಕೆ ಪಳನಿಸ್ವಾಮಿಗೆ ಹಾಗೂ ಅಂದಿನ ತಮಿಳುನಾಡು ಉಪಮುಖ್ಯಮಂತ್ರಿ ಒ. ಪಳನಿಸ್ವಾಮಿಗೆ ಹಿನ್ನಡೆ ಉಂಟು ಮಾಡಿತ್ತು. ಜನವರಿ 2021 ರಂದೇ ಜಯಲಲಿತಾ ಸ್ಮಾರಕ ಉದ್ಘಾಟನೆ ಮಾಡಲಾಗಿತ್ತಾದರೂ ಕೋರ್ಟ್ ಆದೇಶವಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿರಲಿಲ್ಲ.