ಶಿಗ್ಗಾಂವಿ: ಸಿಡಿಎಸ್ ಬಿಪಿನ್ ರಾವತ್ ಸಾವನ್ನು ಸಂಭ್ರಮಿಸುವ ಕಿಡಿಗೇದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಮತ ಚಲಾಯಿಸಿದ ಸಿಎಂ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಬಿಪಿನ್ ರಾವತ್ ನಿಧನದಿಂದ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಕೆಲವರು ಬಿಪಿನ್ ರಾವತ್ ಸಾವನ್ನು ಸಂಭ್ರಮಿಸುವಂತ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದಾರೆ. ಇದು ಖಂಡನೀಯ. ಸಾವು ಸಂಭ್ರಮಿಸುವಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
BIG NEWS: ಒಮಿಕ್ರಾನ್ ಪೀಡಿತ ಒಂಬತ್ತು ಮಂದಿ ಗುಣಮುಖರಾಗಿ ಡಿಸ್ಚಾರ್ಜ್
ಬಿಪಿನ್ ರಾವತ್ ನಿಧನದ ಬಗ್ಗೆ ವಿಕೃತಿ ಮೆರೆದು ಸಾಮಾಜಿಕ ಜಾಲತಾಣಗಳಲ್ಲಿ ಉಡುಪಿ ಮೂಲದ ಬರಹಗಾರರೊಬ್ಬರು ಪೋಸ್ಟ್ ಹಾಕಿದ್ದರು. ಆತನನ್ನು ಬಂಧಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸಿಎಂ, ಬಿಪಿನ್ ರಾವತ್ ಸಾವನ್ನು ಸಂಭ್ರಮಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಇದೇ ವೇಳೆ ಮಹದಾಯಿ ಹೋರಾಟಗಾರರ ಮೇಲಿನ ಕೇಸ್ ವಿಚಾರವಾಗಿ ಮಾತನಾಡಿದ ಸಿಎಂ, ಹೋರಾಟಗಾರರ ಮೇಲಿನ ಕೇಸ್ ರೀ ಓಪನ್ ಮಾಡಿಲ್ಲ. ಕೇಸ್ ವಾಪಸ್ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದ್ದಾರೆ.