ಬೆಂಗಳೂರು: 10 ಲಕ್ಷ ರೈತರಿಗೆ 681 ಕೋಟಿ ರೂಪಾಯಿ ಪರಿಹಾರ ನೀಡಲಾಗಿದೆ. ಮಳೆ ಮತ್ತು ಪ್ರವಾಹ ನಷ್ಟಕ್ಕೆ 1281 ಕೋಟಿ ರೂಪಾಯಿ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ.
ಕಂದಾಯ ಸಚಿವ ಆರ್. ಅಶೋಕ್ ಈ ಬಗ್ಗೆ ಮಾಹಿತಿ ನೀಡಿದ್ದು, ಕಳೆದ ಮೂರು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ 10.02 ಲಕ್ಷ ರೈತರಿಗೆ 681.90 ಕೋಟಿ ರೂಪಾಯಿ ಇನ್ ಪುಟ್ ಸಬ್ಸಿಡಿಯನ್ನು ನೇರವಾಗಿ ಖಾತೆಗೆ ಪಾವತಿಸಲಾಗಿದೆ ಎಂದು ಹೇಳಿದ್ದಾರೆ.
ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ರೈತರಿಗೆ ಪರಿಹಾರ ವಿತರಿಸಿರುವುದು ದಾಖಲೆಯಾಗಿದೆ. ಬೆಳೆ ಪರಿಹಾರಕ್ಕೆ ನವೆಂಬರ್ 30 ರೊಳಗೆ ಅರ್ಜಿ ಸ್ವೀಕರಿಸಲು ಸೂಚನೆ ನೀಡಲಾಗಿತ್ತು. ಆದೇಶದಂತೆ ಅರ್ಜಿ ಸ್ವೀಕರಿಸಿ ಪರಿಹಾರ ವಿತರಿಸಲಾಗಿದೆ. 20 ದಿನದಲ್ಲಿ 560 ಕೋಟಿ ರೂಪಾಯಿ ಪರಿಹಾರ ನೀಡಲಾಗಿದೆ. ಹಿಂದೆ ತಿಂಗಳುಗಳೇ ಕಳೆದರೂ ರೈತರಿಗೆ ಪರಿಹಾರ ಸಿಗುತ್ತಿರಲಿಲ್ಲ. ಮಧ್ಯವರ್ತಿಗಳ ಹಾವಳಿ ಕೂಡ ಇತ್ತು. ಈಗ ರೈತರಿಗೆ ಅಲ್ಪಾವಧಿಯಲ್ಲೇ ಅವರ ಖಾತೆಗೆ ಪರಿಹಾರದ ಮೊತ್ತ ಜಮಾ ಮಾಡಲಾಗಿದೆ ಎಂದು ಹೇಳಲಾಗಿದೆ.