2008ನೇ ಇಸವಿ ನಂತರ ಜನಿಸಿದವರು ಇನ್ಮುಂದೆ ನ್ಯೂಜಿಲೆಂಡ್‌ನಲ್ಲಿ ಸಿಗರೇಟ್ ಖರೀದಿಸಲು ಸಾಧ್ಯವಾಗುವುದಿಲ್ಲ. ಯುವಕರು ಧೂಮಪಾನ ಸೇವನೆ ಮಾಡುವುದು ಉತ್ತಮವಲ್ಲ. ಹೀಗಾಗಿ ಯುವಕರಿಗೆ ಹೊಗೆಯುಗುಳುವ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಅಥವಾ ಪೂರೈಸುವುದು ಅಪರಾಧವಾಗುತ್ತದೆ ಎಂದು ನ್ಯೂಜಿಲ್ಯಾಂಡ್ ನ ಆರೋಗ್ಯ ಸಹಾಯಕ ಸಚಿವ ಆಯೆಶಾ ವೆರಾಲ್ ತಿಳಿಸಿದ್ದಾರೆ.
ಪ್ರಸ್ತುತ ನ್ಯೂಜಿಲೆಂಡ್ ಸರ್ಕಾರದ ಅಂಕಿಅಂಶಗಳ ಪ್ರಕಾರ, 15 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಶೇ. 11.6 ರಷ್ಟು ಜನರು ಧೂಮಪಾನ ಮಾಡುತ್ತಾರೆ, ಇದು ವಯಸ್ಕರಲ್ಲಿ ಶೇ. 29 ರಷ್ಟು ಏರಿಕೆಯಾಗಿದೆ.
2022 ರ ಜೂನ್‌ನಲ್ಲಿ ಈ ಬಗ್ಗೆ ಸಂಸತ್ತಿನಲ್ಲಿ ಶಾಸನವನ್ನು ಮಂಡಿಸಲಾಗುತ್ತದೆಯಂತೆ. ನಂತರ 2024 ರಿಂದ ಹಂತ-ಹಂತಗಳಲ್ಲಿ ನಿರ್ಬಂಧಗಳನ್ನು ಹೊರತರಲಾಗುವುದು. ನಂತರ 2025 ರಲ್ಲಿ ನಿಕೋಟಿನ್ ಅಂಶವನ್ನು ಕಡಿಮೆ ಪ್ರಮಾಣದಲ್ಲಿ ಸೇರಿಸಬೇಕು ಮತ್ತು 2027 ರಿಂದ ಹೊಗೆ-ಮುಕ್ತ ಪೀಳಿಗೆಯನ್ನು ರಚಿಸಲಾಗುತ್ತದೆ ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ಮೂಲಕ ನ್ಯೂಜಿಲೆಂಡ್‌ನಲ್ಲಿ ತಂಬಾಕು ಉದ್ಯಮವನ್ನು ವಿಶ್ವದಲ್ಲೇ ಹೆಚ್ಚು ನಿರ್ಬಂಧಿತವಾಗಿಸುವ ದೇಶವಾಗಿ ಹೊರಹೊಮ್ಮಿದೆ. ಭೂತಾನ್‌ನಲ್ಲಿ ಈ ಹಿಂದೆ ಸಿಗರೇಟ್ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನ್ಯೂಜಿಲೆಂಡ್‌ನ ನೆರೆಯ ದೇಶ ಆಸ್ಟ್ರೇಲಿಯಾವು 2012 ರಲ್ಲಿ ಸಿಗರೇಟ್‌ಗಳ ಸರಳ ಪ್ಯಾಕೇಜಿಂಗ್ ಅನ್ನು ಕಡ್ಡಾಯಗೊಳಿಸಿದ ವಿಶ್ವದ ಮೊದಲ ದೇಶವಾಗಿದೆ.
ಹೊಸ ನಿಯಮಗಳು ಜಾರಿಗೆ ಬಂದ 10 ವರ್ಷಗಳಲ್ಲಿ ದೇಶದ ಧೂಮಪಾನದ ದರವನ್ನು ಅರ್ಧದಷ್ಟು ಕಡಿಮೆ ಮಾಡಲಾಗುತ್ತದೆ ಎಂದು ಸರ್ಕಾರ ಹೇಳಿದೆ.
ಧೂಮಪಾನದಿಂದ ನ್ಯೂಜಿಲೆಂಡ್‌ನಲ್ಲಿ ಪ್ರತಿ ವರ್ಷಕ್ಕೆ ಸುಮಾರು 5,000 ಜನರು ಸಾಯುತ್ತಿದ್ದಾರೆ. ಹೀಗಾಗಿ ಸರ್ಕಾರ ನಿಯಮವನ್ನು ಜಾರಿಗೊಳಿಸಲು ತೀರ್ಮಾನಿಸಿದೆ. ಆರೋಗ್ಯಾಧಿಕಾರಿಗಳು ಈ ನಿಯಮವನ್ನು ಸ್ವಾಗತಿಸಿದ್ರೆ, ಚಿಲ್ಲರೆ ವ್ಯಾಪಾರಿಗಳು ತಮ್ಮ ವ್ಯವಹಾರಗಳ ಮೇಲೆ ಪರಿಣಾಮ ಬೀರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಬ್ಲಾಕ್ ಮಾರುಕಟ್ಟೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.