ಮಡಿಕೇರಿ : ಶಾಲಾ ಶುಲ್ಕ ಕಟ್ಟಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಗೆ ಹಾಕಿದ್ದಕ್ಕೆ ಬೇಸರಗೊಂಡ ವಿದ್ಯಾರ್ಥಿಯ ತಂದೆಯೊಬ್ಬರು ಪ್ರಧಾನಿ ಮೋದಿಗೆ ಪತ್ರ ಬರೆದು ದೂರು ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿಗೂ ಪತ್ರ ಬರೆದಿದ್ದಾರೆ ಎನ್ನಲಾಗಿದೆ.
ಜಿಲ್ಲೆಯ ಗೋಣಿಕೊಪ್ಪದಲ್ಲಿ ಈ ಘಟನೆ ನಡೆದಿದೆ. ಮಗನನ್ನು ಹೊರಗೆ ಹಾಕಿದ್ದಕ್ಕೆ ಬೇಸತ್ತ ತಂದೆ ಬೆಳ್ಳಿಯಪ್ಪ ಎಂಬುವವರು ಇ ಮೇಲ್ ಮೂಲಕ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಅಲ್ಲದೆ, ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ್ ಅವರಿಗೂ ದೂರು ನೀಡಿದ್ದಾರೆ.
ಗೋಣಿಕೊಪ್ಪದಲ್ಲಿನ ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿ ಮುತ್ತಣ್ಣ 5ನೇ ತರಗತಿಯಲ್ಲಿ ಓದುತ್ತಿದ್ದ. ಈ ವಿದ್ಯಾರ್ಥಿ ಸೇರಿದಂತೆ 20 ವಿದ್ಯಾರ್ಥಿಗಳನ್ನು ಪೂರ್ತಿ ಶುಲ್ಕ ಕಟ್ಟಿಲ್ಲ ಎಂಬ ಕಾರಣಕ್ಕೆ ಹೊರಗೆ ಹಾಕಲಾಗಿತ್ತು ಎಂದು ತಿಳಿದು ಬಂದಿದೆ.
ಈ ಕುರಿತು ಬೆಳ್ಳಿಯಪ್ಪ ಶಾಲಾ ಆಡಳಿತ ಮಂಡಳಿಯನ್ನು ಪ್ರಶ್ನಿಸಿದ್ದರು. ಸಿಬ್ಬಂದಿಯಾಗಲಿ ಆಡಳಿತ ಮಂಡಳಿಯಾಗಲಿ ಸರಿಯಾಗಿ ಉತ್ತರ ನೀಡಿಲ್ಲ. ಹೀಗಾಗಿ ಬೇಸರಗೊಂಡ ಅವರು, ಪತ್ರ ಬರೆದಿದ್ದಾರೆ ಎನ್ನಲಾಗಿದೆ.
ಪಾಲಕರು ಈಗಾಗಲೇ ಶಾಲೆಗೆ 60 ಸಾವಿರ ರೂಪಾಯಿ ಶುಲ್ಕ ಕಟ್ಟಿದ್ದಾರೆ. ಆದರೂ ಇನ್ನು ಶುಲ್ಕ ಕಟ್ಟುವಂತೆ ಶಾಲಾ ಆಡಳಿತ ಮಂಡಳಿ ಒತ್ತಾಯಿಸುತ್ತಿತ್ತು ಎಂದು ಬೆಳ್ಳಿಯಪ್ಪ ಆರೋಪಿಸಿದ್ದಾರೆ.
ಈ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ್, ಡಿಡಿಪಿಐ ವೇದಮೂರ್ತಿ ಅವರಿಗೆ ಶಾಲೆಗೆ ಭೇಟಿ ನೀಡುವಂತೆ ಸೂಚಿಸಿದ್ದಾರೆ.
ವಿದ್ಯಾರ್ಥಿಯನ್ನು ಮೂರು ದಿನ ಗ್ರಂಥಾಲಯದಲ್ಲಿಯೇ ಕೂರಿಸಿರುವ ವಿಷಯ ಕೂಡ ಬೆಳಕಿಗೆ ಬಂದಿದೆ. ವಿದ್ಯಾರ್ಥಿ ಸಹಾಯವಾಣಿಗೂ ಕರೆ ಮಾಡಿದ್ದಾನೆ ಎನ್ನಲಾಗಿದೆ. ಶಾಲಾ ಆಡಳಿತ ಮಂಡಳಿ ಮಾತ್ರ ಇದು ಸುಳ್ಳು ಎಂದು ಹೇಳಿದೆ.