ಪಶ್ಚಿಮ ಆಫ್ರಿಕಾದಲ್ಲಿ ಸೇವಾ ಕಾರ್ಯದಲ್ಲಿ ಭಾಗಿಯಾಗಿದ್ದ ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯ ಮೇಲೆ ಉಗ್ರರು ದಾಳಿ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆ ಪಶ್ಚಿಮ ಆಫ್ರಿಕಾದಲ್ಲಿನ ಮಾಲಿಯಲ್ಲಿ ನಡೆದಿದೆ. ಈ ಭೀಕರ ಘಟನೆಯಲ್ಲಿ 7 ಜನ ಶಾಂತಿಪಾಲಕರು ಸಾವನ್ನಪ್ಪಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ ಎಂದು ವಿಶ್ವಸಂಸ್ಥೆಯ ವಕ್ತಾರ ಸ್ಟಿಫನ್ ಡುಜಾರಿಕ್ ಹೇಳಿದ್ದಾರೆ.
ಈ ಘಟನೆಗೆ ಜಗತ್ತಿನಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಮೇಲೆ ನಡೆದಿರುವ ದಾಳಿಗಳಲ್ಲಿ ಇದು ಅತೀ ದೊಡ್ಡ ದಾಳಿ ಎಂದು ಸ್ಟಿಫನ್ ಡುಜಾರಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ದಾಳಿಕೋರರನ್ನು ಶೀಘ್ರದಲ್ಲಿಯೇ ಪತ್ತೆ ಹಚ್ಚಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ವಿಶ್ವ ಸಂಸ್ಥೆಯ ಮುಖ್ಯಸ್ಥ ಅಂಟೋನಿಯೊ ಗುಟೇರಸ್ ಆಗ್ರಹಿಸಿದ್ದಾರೆ.
ಈ ಶಾಂತಿ ಪಾಲನ ತಂಡವು ಬುಧವಾರ ಮಾಲಿಯಲ್ಲಿನ ಬಾಂಡೈಗ್ರಾ ಪ್ರಾಂತ್ಯದ ಸಿವೆರಾಕ್ಕೆ ಹೋಗುತ್ತಿತ್ತು. ವಾಹನದಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಸಿವೆರಾ ಎಂಬಲ್ಲಿ ಉಗ್ರರು ದಾಳಿ ನಡೆಸಿ ಸುಧಾರಿತ ಸ್ಫೋಟಕದಿಂದ ವಾಹನ ಸ್ಫೋಟಿಸಿದ್ದಾರೆ.