ಬೆಂಗಳೂರು: ಭೂಮಿ ಖರೀದಿಸಿ ಭೂಪರಿವರ್ತನೆ ಮಾಡಿಸಿಕೊಳ್ಳಲು ಇನ್ನು ಮುಂದೆ ತಿಂಗಳಗಟ್ಟಲೆ ಕಾಯಬೇಕಿಲ್ಲ. ಇದಕ್ಕಾಗಿ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡುವ ಅಗತ್ಯವೂ ಇಲ್ಲ. ನಿಯಮವನ್ನು ಸರಳೀಕರಣಗೊಳಿಸಿ ಬೇಗನೆ ಅನುಮತಿ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ.
ಕಂದಾಯ ಸಚಿವ ಆರ್. ಅಶೋಕ್ ಈ ಬಗ್ಗೆ ಮಾಹಿತಿ ನೀಡಿದ್ದು, ಒಂದೇ ದಿನದಲ್ಲಿ ಭೂಪರಿವರ್ತನೆ ಮಾಡಿಕೊಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಭೂ ಪರಿವರ್ತನೆಗಾಗಿ ಹಲವು ಪ್ರಾಧಿಕಾರಗಳ ಅನುಮತಿ ಪಡೆಯಬೇಕಿತ್ತು. ಅಲ್ಲದೆ ಸಂಕೀರ್ಣ ನಿಯಮಾವಳಿಗಳು ಇವೆ. ಅವುಗಳನ್ನು ಸರಳಗೊಳಿಸಿ ಒಂದೇ ದಿನದಲ್ಲಿ ಭೂ ಪರಿವರ್ತನೆ ಮಾಡಿ ಕೊಡುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಭೂ ಪರಿವರ್ತನೆಗೆ ಒಳಪಡುವ ಜಮೀನು ಒತ್ತುವರಿ ಆಗಿರಬಾರದು. ಪರಿಶಿಷ್ಟರಿಗೆ ಸೇರಿದ ಭೂಮಿ ಆಗಿರಬಾರದು. ಹೊಸ ನಿಯಮದ ಅನುಸಾರ ಅರ್ಜಿ ಸಲ್ಲಿಸಿದವರಿಗೆ ಕೆಲವು ಷರತ್ತು ವಿಧಿಸಿದರೆ ಪ್ರಕ್ರಿಯೆ ಸುಲಭವಾಗುತ್ತದೆ. ಭೂ ಪರಿವರ್ತನೆ ವಿಳಂಬವಾಗಿ ಅನಗತ್ಯ ಅಲೆದಾಟ ನಡೆಸುವುದನ್ನು ತಪ್ಪಿಸುವ ಉದ್ದೇಶದಿಂದ ಈ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.