ಇಂದೋರ್: ಮಧ್ಯಪ್ರದೇಶದ ಮೃಗಾಲಯದಲ್ಲಿ ಹೆಣ್ಣು ಚಿರತೆಯೊಂದು ನಾಪತ್ತೆಯಾಗಿದ್ದು, ಅದನ್ನು ಹುಡುಕುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಆರು ದಿನಗಳ ನಂತರ ಈಗ ಗಂಡು ಚಿರತೆಯೊಂದನ್ನು ರಕ್ಷಿಸಿದೆ.
ಎಂಟು ತಿಂಗಳ ಚಿರತೆ ಹಠಾತ್ ನಾಪತ್ತೆ ಪ್ರಕರಣ ಏಳು ದಿನಗಳು ಕಳೆದಿವೆ. ಡಿಸೆಂಬರ್ 1 ರಂದು, ಬುರ್ಹಾನ್ಪುರ ಜಿಲ್ಲೆಯಿಂದ ಇಂದೋರ್ನ ಕಮಲಾ ನೆಹರು ಪ್ರಾಣಿ ಸಂಗ್ರಹಾಲಯ ಮೃಗಾಲಯಕ್ಕೆ ಚಿಕಿತ್ಸೆಗಾಗಿ ಚಿರತೆಯನ್ನು ಕರೆತರಲಾಗಿತ್ತು. ಆದರೆ, ಪಂಜರದಿಂದ ನುಸುಳಿದ್ದು, ನಾಪತ್ತೆಯಾಗಿದೆ.
ಇನ್ನು ಚಿರತೆ ನಾಪತ್ತೆ ಬಗ್ಗೆ ಅರಣ್ಯ ಸಚಿವ ವಿಜಯ್ ಶಾ ಅಸಮಾಧಾನ ವ್ಯಕ್ತಪಡಿಸಿದ್ದು, ಶೋಧ ಕಾರ್ಯಕ್ಕೆ ತಂಡವನ್ನು ನಿಯೋಜಿಸಲಾಗಿದೆ. ಇದಕ್ಕಾಗಿ 200 ಸಿಬ್ಬಂದಿಯ ತಂಡವನ್ನು ನಿಯೋಜಿಸಲಾಗಿದ್ದು, ಸಿಸಿಟಿವಿ ಕ್ಯಾಮರಾಗಳನ್ನು ಸ್ಕ್ಯಾನ್ ಮಾಡಲಾಗಿದೆ ಮತ್ತು ಚಿರತೆ ಪತ್ತೆಗೆ ಸ್ನಿಫರ್ ಡಾಗ್ಗಳನ್ನು ನಿಯೋಜಿಸಲಾಗಿದೆ.
ಆರು ದಿನಗಳ ನಂತರ ಗಾಯಗೊಂಡ ಚಿರತೆಯೊಂದು ಮೃಗಾಲಯದ ಸಮೀಪದ ಅರಣ್ಯ ಅತಿಥಿ ಗೃಹದಲ್ಲಿ ಪತ್ತೆಯಾಗಿದೆ. ಇದು ತೀವ್ರವಾಗಿ ನಿರ್ಜಲೀಕರಣಗೊಂಡಿರುವುದು ಕಂಡುಬಂದಿತ್ತು. ನಾಪತ್ತೆಯಾದ ಚಿರತೆ ಹೆಣ್ಣು, ಆದರೆ ರಕ್ಷಿಸಲ್ಪಟ್ಟ ಪ್ರಾಣಿ ಗಂಡು ಎಂದು ತಿಳಿದು ಬಂದಿದೆ.
ಅರಣ್ಯ ಇಲಾಖೆಯು ಏಳರಿಂದ ಎಂಟು ತಿಂಗಳ ಗಂಡು ಚಿರತೆ ಮರಿಯನ್ನು ಮಂಗಳವಾರ ಮೃಗಾಲಯಕ್ಕೆ ಹಸ್ತಾಂತರಿಸಿದೆ ಎಂದು ಇಂದೋರ್ ಮೃಗಾಲಯದ ಉಸ್ತುವಾರಿ ಉತ್ತಮ್ ಯಾದವ್ ಹೇಳಿದ್ದಾರೆ.