ಚೆನ್ನೈ: ಸಿಡಿಎಸ್ ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನ ದುರಂತದಲ್ಲಿ 13 ಜನರು ಮೃತಪಟ್ಟಿದ್ದು, ಓರ್ವ ಗಾಯಾಳು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ 14 ಜನರು ಪ್ರಯಾಣಿಸುತ್ತಿದ್ದ MI-17V5 ಹೆಲಿಕಾಪ್ಟರ್ ತಮಿಳುನಾಡಿನ ಕುನ್ನೂರು ಬಳಿಯ ದುರ್ಗಮ ಪ್ರದೇಶದಲ್ಲಿ ದುರಂತಕ್ಕೀಡಾಗಿದ್ದು, ಸೇನಾ ಹೆಲಿಕಾಪ್ಟರ್ ಪತನದ ಭಯಂಕರ ಸನ್ನಿವೇಶವನ್ನು ಪ್ರತ್ಯಕ್ಷದರ್ಶಿ ಕೃಷ್ಣಸ್ವಾಮಿ ವಿವರಿಸಿದ್ದಾರೆ.
ಮಧ್ಯಾಹ್ನ 12:20ರ ಸುಮಾರಿಗೆ ಹೆಲಿಕಾಪ್ಟರ್ ವೊಂದು ಮರಕ್ಕೆ ಅಪ್ಪಳಿಸಿದ್ದು, ಭಯಂಕರ ಶಬ್ಧದೊಂದಿಗೆ ಬೆಂಕಿ ಹೊತ್ತಿಕೊಂಡಿದೆ. ಹೆಲಿಕಾಪ್ಟರ್ ನಲ್ಲಿದ್ದವರು ಬೆಂಕಿ ತಗುಲಿ ಉರಿಯುತ್ತಲೇ ಕೆಳಗೆ ಬೀಳಲಾರಂಭಿಸಿದ್ದಾರೆ. ಭಯಂಕರ ಶಬ್ಧ ಕೇಳುತ್ತಲೇ ಸುತ್ತಮುತ್ತಲು ಜನ ಸೇರಿದ್ದಾರೆ. ಘಟನೆ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾಗಿ ತಿಳಿಸಿದ್ದಾರೆ.
ಸೇನಾ ಹೆಲಿಕಾಪ್ಟರ್ ಸುಲೂರಿನಿಂದ ವೆಲ್ಲಿಂಗ್ಟನ್ ನತ್ತ ತೆರಳುತ್ತಿತ್ತು. ಟೇಕ್ ಆಫ್ ಆದ ಕೆಲ ಸಮಯದಲ್ಲಿ ಕುನ್ನೂರು ಬಳಿ ದಟ್ಟಕಾನನದ ನಡುವೆ ಹೆಲಿಕಾಪ್ಟರ್ ಪತನಗೊಂಡಿದೆ. ಗಂಭೀರವಾಗಿ ಗಾಯಗೊಂಡಿದ್ದ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದುರಂತದ ಸ್ಥಳದಲ್ಲಿ 11 ಜನರ ಮೃತದೇಹ ಪತ್ತೆಯಾಗಿದೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಆದರೀಗ ಗಾಯಾಳುಗಳಲ್ಲಿ ಇಬ್ಬರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದು, ಒಟ್ಟು 13 ಜನರು ಸಾವನ್ನಪ್ಪಿದ್ದಾರೆ. ಇನ್ನೋರ್ವ ವ್ಯಕ್ತಿ ಜೀವನ್ಮರಣದ ನಡುವೆ ಆಸ್ಪತ್ರೆಯಲ್ಲಿ ಹೋರಾಟ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಹೆಲಿಕಾಫ್ಟರ್ ಬೆಂಕಿ ಹೊತ್ತಿ ಉರಿಯುತ್ತಿರುವಂತೆಯೇ ಸ್ಥಳೀಯ ಯುವಕ ಕುಮಾರ್ ಎಂಬಾತ ಪೊಲೀಸರು ಹಾಗೂ ಅಗ್ನಿಶಾಮಕ ದಳಕ್ಕೆ ಕೂಡಲೇ ಕರೆ ಮಾಡಿದ. ಸ್ಥಳೀಯರು ಬಹಳಷ್ಟು ಜನ ಸೇರಿದರಾದರೂ ಬೆಂಕಿಯ ತೀವ್ರತೆ ನೋಡಿ ಭಯದಿಂದ ಯಾರೂ ಹತ್ತಿರಕ್ಕೆ ಹೋಗಲಿಲ್ಲ ಎಂದು ಕೃಷ್ಣಸ್ವಾಮಿ ವಿವರಿಸಿದ್ದಾರೆ.