ನವದೆಹಲಿ: ಪ್ರಸ್ತುತ ಚಲಾವಣೆಯಲ್ಲಿರುವ ಒಟ್ಟು ನೋಟುಗಳಲ್ಲಿ 2000 ರೂಪಾಯಿ ಮುಖಬೆಲೆಯ ನೋಟುಗಳ ಪ್ರಮಾಣ ಕುಸಿತ ಕಂಡಿದೆ.
ಹಣಕಾಸು ಖಾತೆ ಸಹಾಯಕ ಸಚಿವ ಪಂಕಜ್ ಚೌಧರಿ ರಾಜ್ಯಸಭೆಗೆ ನೀಡಿರುವ ಮಾಹಿತಿ ಪ್ರಕಾರ, ಒಟ್ಟು ನೋಟುಗಳಲ್ಲಿ 2000 ರೂ. ನೋಟುಗಳ ಪ್ರಮಾಣ ನವೆಂಬರ್ ವೇಳೆಗೆ ಶೇಕಡ 1.75 ರಷ್ಟು ಕುಸಿತ ಕಂಡಿದೆ. 223.3 ಕೋಟಿ ನೋಟುಗಳು ಚಲಾವಣೆಯಲ್ಲಿವೆ.
2018ರ ಮಾರ್ಚ್ ವೇಳೆಗೆ ಶೇಕಡ 3.27 ರಷ್ಟು(335.3 ಕೋಟಿ ನೋಟುಗಳು) 2000 ರೂಪಾಯಿ ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿದ್ದವು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಸರ್ಕಾರ ಎಷ್ಟು ನೋಟುಗಳನ್ನು ಮುದ್ರಿಸಬೇಕು ಎಂಬುದರ ಬಗ್ಗೆ ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಳ್ಳಲಿವೆ.
2018 – 19 ರ ನಂತರ ಹೊಸದಾಗಿ 2000 ರೂ. ಮುಖಬೆಲೆಯ ನೋಟುಗಳನ್ನು ಮುದ್ರಿಸಿಲ್ಲ. ಹಾಳಾದ ನೋಟುಗಳು ಚಲಾವಣೆಯಿಂದ ಹೊರಗುಳಿಯಲಿವೆ. 2016 ರ ನವೆಂಬರ್ 8 ರಂದು ದೇಶದಲ್ಲಿ ನೋಟು ಅಮಾನ್ಯೀಕರಣ ಸಂದರ್ಭದಲ್ಲಿ 1000 ರೂ., 500 ರೂ. ಮುಖಬೆಲೆಯ ನೋಟುಗಳನ್ನು ರದ್ದು ಮಾಡಿ ಹೊಸದಾಗಿ 500 ರೂ., 2000 ರೂ. ಮುಖಬೆಲೆ ನೋಟುಗಳನ್ನು ಬಿಡುಗಡೆ ಮಾಡಲಾಗಿತ್ತು. ಈಗ 2000 ರೂ. ನೋಟುಗಳ ಚಲಾವಣೆ ಇಳಿಕೆಯಾಗಿದೆ ಎನ್ನಲಾಗಿದೆ.