ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಇರುತ್ತಾರೆ ಎಂಬ ಗಾದೆ ಯಾವತ್ತೂ ಸುಳ್ಳಾಗುವುದಿಲ್ಲ. ಇದೀಗ ನಿರುದ್ಯೋಗಿ ಮಹಿಳೆಯೊಬ್ಬಳಿಗೆ ಉದ್ಯೋಗ ಕೊಡಿಸುವ ಭರವಸೆ ನೀಡಿದ ಸ್ವಯಂ ಘೋಷಿತ ದೇವಮಾನವ ಆಕೆಯಿಂದ 38 ಲಕ್ಷ ರೂ. ವಂಚಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಮುಂಬೈನ 45 ವರ್ಷದ ಮಹಿಳೆ 10 ವರ್ಷಗಳಿಂದ ನಿರುದ್ಯೋಗಿಯಾಗಿದ್ದು, ಸಾಕಷ್ಟು ಉದ್ಯೋಗಗಳನ್ನು ಹುಡುಕಿದ್ರೂ ಎಲ್ಲೂ ಕೆಲಸ ಸಿಗಲಿಲ್ಲ. ಈ ವೇಳೆ ಆನ್ಲೈನ್ ನಲ್ಲಿ ಪರಿಚಯವಾದ ಸ್ವಯಂಘೋಷಿತ ದೇವಮಾನವ, ಮಹಿಳೆಯ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದಾನೆ. ಅಲ್ಲದೆ ಆನ್‌ಲೈನ್‌ನಲ್ಲಿ ಹವನ ನಡೆಸಿದರೆ ಆಕೆಯ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ನಂಬಿಸಿದ್ದಾನೆ.
ದೇವಮಾನವ ಎಂದು ಹೇಳಿದ ವ್ಯಕ್ತಿಯ ಮಾತನ್ನು ನಂಬಿದ ಮಹಿಳೆ, ತನ್ನಲ್ಲಿದ್ದ ಚಿನ್ನ, ಉಳಿತಾಯ ಮಾಡಿದ್ದ ಹಣ ಎಲ್ಲವನ್ನೂ ಆತನಿಗೆ ನೀಡಿದ್ದಾಳೆ. ಆದರೆ 38 ಲಕ್ಷ ರೂ. ಪಡೆದ ಆತ ಮಹಿಳೆಗೆ ಯಾವುದೇ ಉದ್ಯೋಗವನ್ನು ದೊರಕಿಸಿಕೊಡದೆ ವಂಚಿಸಿದ್ದಾನೆ.
ಮುಂಬೈನ ಬೋರಿವಲಿ ಪಶ್ಚಿಮ ಪ್ರದೇಶದಲ್ಲಿ ತನ್ನ ಪೋಷಕರೊಂದಿಗೆ ವಾಸಿಸುತ್ತಿರುವ ಮಹಿಳೆ ದೀರ್ಘಕಾಲದಿಂದ ನಿರುದ್ಯೋಗಿಯಾಗಿದ್ದರು. 2018ರಲ್ಲಿ ಟಿವಿ ಜಾಹೀರಾತು ಗಮನಿಸಿದ ಮಹಿಳೆಗೆ, ಅಲ್ಲಿ ದೇವಮಾನವನೊಬ್ಬ ಜನರ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಜನರ ಸಮಸ್ಯೆಗಳನ್ನು ಪರಿಹರಿಸುತ್ತಾನೆ ಎಂದು ಹೇಳಿಕೊಂಡಿದ್ದಾನೆ.
ಆಕೆ ಜಾಹೀರಾತಿನಲ್ಲಿ ನೀಡಲಾದ ಸಂಖ್ಯೆಗೆ ಕರೆ ಮಾಡಿ ತನಗೆ ಸಹಾಯ ಮಾಡುವಂತೆ ಆ ವ್ಯಕ್ತಿಯನ್ನು ವಿನಂತಿಸಿದ್ದಾಳೆ. ಮಹಿಳೆಯ ಹೆಸರಲ್ಲಿ ಪೂಜೆ ಮಾಡುವುದಾಗಿ ಹೇಳಿ ನಂಬಿಸಿದ್ದ. ಅವನ ಮಾತಿಗೆ ಮರುಳಾಗಿ ಕಳೆದ 4 ವರ್ಷದಲ್ಲಿ ವಂಚಕ ಕೇಳಿದಾಗಲೆಲ್ಲಾ ಹಣ ಕೊಟ್ಟಿದ್ದಾಳೆ.
ಇಷ್ಟು ಸಮಯ ಕಳೆದರೂ ತನಗೆ ಉದ್ಯೋಗ ಸಿಗದೇ ಇದ್ದಾಗ, ಆ ಮಹಿಳೆ ನವೆಂಬರ್ 27 ರಂದು ಅಯೋಧ್ಯೆಗೆ ಪ್ರಯಾಣ ಬೆಳೆಸಿದ್ದಾಳೆ. ಈ ವೇಳೆ ಆನ್ಲೈನ್ ಪೂಜೆ ಮಾಡುವವರು ಯಾರು ಕೂಡ ಇಲ್ಲ ಎಂಬುದು ತಿಳಿದು ಬಂದಿದೆ. ತಾನು ಮೋಸ ಹೋಗಿರುವುದಾಗಿ ಸ್ಪಷ್ಟವಾಗಿ ತಿಳಿದ ಮಹಿಳೆ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾಳೆ. ಕೇಸ್ ದಾಖಲಿಸಿಕೊಂಡ ಪೊಲೀಸರು ವಂಚಕನ ಪತ್ತೆಗೆ ಬಲೆ ಬೀಸಿದ್ದಾರೆ.