ನ್ಯೂಯಾರ್ಕ್ : ಅಮೆರಿಕದಲ್ಲಿ ಭಾರತೀಯ ಮೂಲದ ವ್ಯಕ್ತಿಗೆ ದರೋಡೆಕೋರರು ಗುಂಡು ಹಾರಿಸಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಭಾರತೀಯ ಮೂಲದ 45 ವರ್ಷದ ಅಮಿತ್ ಕುಮಾರ್ ಪಟೇಲ್, ದರೋಡೆಕೋರರ ಗುಂಡಿಗೆ ಬಲಿಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಈ ಘಟನೆ ಅಲ್ಲಿಯ ಜಾರ್ಜಿಯಾದಲ್ಲಿ ಪೊಲೀಸ್ ಠಾಣೆಯ ಹತ್ತಿರವೇ ನಡೆದಿದೆ. ಸಾವನ್ನಪ್ಪಿದ ವ್ಯಕ್ತಿ ಗ್ಯಾಸ್ ಸ್ಟೇಷನ್ ಮಾಲೀಕರಾಗಿದ್ದರು ಎನ್ನಲಾಗಿದೆ.
ಜಾರ್ಜಿಯಾ ಪಟ್ಟಣದ ಸೈನೋವಸ್ ಬ್ಯಾಂಕ್ ನ ಹೊರಗೆ ಅಮಿತ್ ಕುಮಾರ್ ಪಟೇಲ್ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಮಸ್ಕೋಜಿ ಕೌಂಟಿ ಕೊರೋನರ್ ಅಧಿಕಾರಿ ಹೇಳಿದ್ದಾರೆ ಎಂದು ಅಲ್ಲಿಯ ಡಬ್ಲ್ಯೂಟಿವಿಎಂ ಚಾನೆಲ್ ವರದಿ ಮಾಡಿದೆ.
ಭಾರತೀಯ ಮೂಲದ ವ್ಯಕ್ತಿ ಬ್ಯಾಂಕ್ ಗೆ ಹಣ ತುಂಬಲು ತೆರಳಿದ್ದ ಸಂದರ್ಭದಲ್ಲಿ ದುಷ್ಕರ್ಮಿಯೊಬ್ಬ ಗುಂಡು ಹಾರಿಸಿ, ಹಣ ತೆಗೆದುಕೊಂಡು ಹೋಗಿದ್ದಾನೆ. ಇಂದು ಅಮಿತ್ ಕುಮಾರ್ ಅವರ ಮಗಳ ಹುಟ್ಟು ಹಬ್ಬವಿತ್ತು ಎಂದು ಹತ್ಯೆಯಾದ ಅಮಿತ್ ಕುಮಾರ್ ಅವರ ವ್ಯವಹಾರದ ಪಾಲುದಾರ ವಿನ್ನಿ ಪಟೇಲ್ ಹೇಳಿದ್ದಾರೆ.