ತನ್ನ ಉದ್ಯೋಗಿಗಳಿಗೆ ಝೂಮ್ ಕಾಲ್ ಮುಖಾಂತರ ಸಭೆ ನಡೆಸಿದ ಬೆಟರ್ ಡಾಟ್ ಕಾಮ್ ಸಿಇಒ ವಿಶಾಲ್ ಗಾರ್ಗ್, ತಮ್ಮ ಕಂಪನಿಯಿಂದ 900 ಉದ್ಯೋಗಿಗಳನ್ನು ವಜಾಗೊಳಿಸಿದ್ದಾರೆ.
ಸಭೆಯ ಭಾಗವಾಗಿದ್ದ ಉದ್ಯೋಗಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ಕರೆಯನ್ನು ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿದ್ದು, ಕಂಪನಿ ಸಿಇಒ ಪರ ಹಾಗೂ ವಿರೋಧದ ಚರ್ಚೆ ನಡೆಯುತ್ತಿದೆ.
ಇದು ನೀವು ಕೇಳಲು ಬಯಸುವ ಸುದ್ದಿಯಾಗಿಲ್ಲ. ನೀವು ಈ ಕರೆಯಲ್ಲಿ ಇದ್ದರೆ, ವಜಾಗೊಳಿಸಲಾಗಿರುವ ದುರದೃಷ್ಟಕರ ಗುಂಪಿನ ಭಾಗವಾಗಿದ್ದೀರಿ. ಇಲ್ಲಿ ನಿಮ್ಮ ಉದ್ಯೋಗವನ್ನು ತಕ್ಷಣವೇ ಕೊನೆಗೊಳಿಸಲಾಗುತ್ತದೆ ಎಂದು ಸಿಇಒ ವಿಶಾಲ್ ಗಾರ್ಗ್ ಹೇಳಿದ್ದಾರೆ.
ಇದು ನಿಜವಾಗಿಯೂ ಸವಾಲಿನ ನಿರ್ಧಾರವಾಗಿದೆ ಎಂದಿರುವ ಸಿಇಒ, ತಮ್ಮ ವೃತ್ತಿಜೀವನದಲ್ಲಿ ಎರಡನೇ ಬಾರಿ ಈ ರೀತಿಯ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ಕಾನ್ಫರೆನ್ಸ್ ಕರೆಯ ಸಮಯದಲ್ಲಿ ತಿಳಿಸಿದ್ದಾರೆ.
ಮೊದಲ ಬಾರಿಗೆ ಅವರು ಉದ್ಯೋಗಿಗಳನ್ನು ಕೆಲಸದಿಂದ ಕಿತ್ತು ಹಾಕಿದಾಗ ಬಹಳ ಬೇಸರಪಟ್ಟುಕೊಂಡು ಅತ್ತಿದ್ದರಂತೆ. ಆದರೆ, ಈ ಬಾರಿ ಮಾತ್ರ ಅವರು ಬಹಳ ಕಠಿಣ ಪರಿಸ್ಥಿತಿಯನ್ನು ದೃಢನಿರ್ಧಾರದಿಂದ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ.
ಮಾರುಕಟ್ಟೆ, ದಕ್ಷತೆ, ಕಾರ್ಯಕ್ಷಮತೆ ಮತ್ತು ಉತ್ಪಾದಕತೆ ಹೀಗೆ ಹಲವಾರು ಕಾರಣಗಳಿಗಾಗಿ ಕಂಪನಿಯ ಸುಮಾರು ಶೇ. 15 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವುದಾಗಿ ಸಿಇಒ ಹೇಳಿದ್ದಾರೆ.