ನವದೆಹಲಿ: ಸದ್ಯ ಬಳಕೆಯಲ್ಲಿರುವ ಗೃಹ ಬಳಕೆಯ ಸಿಲಿಂಡರ್ ತೂಕ 14.2 ಕೆ.ಜಿ. ಇದೆ. ಇದನ್ನು ಸಾಗಾಣಿಕೆ ಮಾಡಲು ಮನೆಯಲ್ಲಿದ್ದ ಮಹಿಳೆಯರಿಗೆ ಕಷ್ಟ ಸಾಧ್ಯ. ಚಿಕ್ಕ ಮಕ್ಕಳಿಗಂತೂ ಆಗದ ಮಾತು. ಹೀಗಾಗಿ ಸಿಲಿಂಡರ್ ಮನೆಗೆ ಬರುವ ದಿನ ಮಹಿಳೆಯರಿಗೆ ಕಿರಿಕಿರಿ ಆಗುವುದು ಕಾಮನ್.
ಸದ್ಯ ಈ ತೊಂದರೆ ತಪ್ಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಗೃಹ ಬಳಕೆಯ ಸಿಲಿಂಡರ್ ತೂಕವನ್ನು ಮಹಿಳೆಯರ ಹಿತದೃಷ್ಟಿಯಿಂದ ಕಡಿಮೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಹೀಗಂತ ರಾಜ್ಯ ಸಭೆಯಲ್ಲಿ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಸದಸ್ಯರೊಬ್ಬರು, ಸಿಲಿಂಡರ್ ಭಾರವಾಗಿದ್ದರಿಂದಾಗಿ ಮಹಿಳೆಯರು ಎದುರಿಸುವ ಸಮಸ್ಯೆಗಳ ಕುರಿತು ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿದ ಅವರು, ಮಹಿಳೆಯರು ಭಾರ ಹೊರುವುದನ್ನು ನಾವು ಬಯಸುವುದಿಲ್ಲ. ಹೀಗಾಗಿಯೇ ಅದರ ತೂಕ ಇಳಿಸುವ ಚಿಂತನೆ ನಡೆದಿದೆ ಎಂದು ಹೇಳಿದ್ದಾರೆ.
ಆದರೆ, 14.2 ಕೆಜಿ ಇರುವ ಗೃಹ ಬಳಕೆಯ ತೂಕವನ್ನು ಎಷ್ಟು ಕಡಿಮೆ ಮಾಡಲಾಗುತ್ತದೆ ಎನ್ನುವುದನ್ನು ಕೇಂದ್ರ ಸರ್ಕಾರ ಇದುವರೆಗೂ ನಿರ್ಧರಿಸಿಲ್ಲ. ಈ ತೂಕವನ್ನು 5 ಕೆಜಿಗೆ ಇಳಿಸಬೇಕೆ ? ಅಥವಾ ಬೇರೆ ಮಾರ್ಗವಿದೆಯೇ ? ಎಂಬ ಕುರಿತು ಇನ್ನೂ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂದು ಅವರು ಹೇಳಿದ್ದಾರೆ.