ಬೆಂಗಳೂರು: ಪರಿಷತ್ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಬಗ್ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಇದು ಬಿಜೆಪಿ ದುರ್ಬಲತೆಗೆ ಸಾಕ್ಷಿ ಎಂದು ವ್ಯಂಗ್ಯವಾಡಿದ್ದಾರೆ.
ಜೆಡಿಎಸ್ ಜತೆ ಹೋಗುತ್ತೇವೆ ಎಂದು ಮಾಜಿ ಸಿಎಂ ಯಡಿಯೂರಪ್ಪನವರು ಹೇಳಿರುವುದು ಬಿಜೆಪಿ ದುಸ್ಥಿತಿಯನ್ನು ತೋರುತ್ತದೆ. ಕೇಂದ್ರ ಹಾಗೂ ರಾಜ್ಯ ಎರಡೂ ಕಡೆ ಬಿಜೆಪಿ ಸರಕಾರವೇ ಆಳ್ವಿಕೆಯಲ್ಲಿದೆ. ಆದರೂ ಅವರಿಗೆ ಸ್ವಂತ ಬಲದ ಮೇಲೆ ನಂಬಿಕೆ ಇಲ್ಲ. ಜೆಡಿಎಸ್ ಮೇಲೆ ಅವಲಂಬಿತವಾಗಲು ಮುಂದಾಗಿದೆ ಎಂದು ಛೇಡಿಸಿದರು.
ಶಿವಮೊಗ್ಗ ಸೇರಿದಂತೆ ಹಲವೆಡೆ ಬಿಜೆಪಿ ಅಭ್ಯರ್ಥಿಗಳು ಸೋಲುತ್ತಿದ್ದಾರೆ ಎಂಬುದು ಇದರಿಂದ ಸಾಬೀತಾಗುತ್ತದೆ. ನಾವು ಮೊದಲಿಂದಲೂ ಬಿಜೆಪಿ ಜತೆ ಅಂತರ ಕಾಯ್ದುಕೊಂಡಿದ್ದೇವೆ. ಆದರೆ ಜೆಡಿಎಸ್ ಜತೆ ವಿಷಯಾಧಾರಿತವಾಗಿ ಹೊಂದಾಣಿಕೆ ಮಾಡಿಕೊಂಡಿದ್ದು, ವಿರೋಧ ಮಾಡಿದ್ದದು ಎಲ್ಲವೂ ನಿಜ. ಈಗಲೂ ಬೆಂಗಳೂರು ಗ್ರಾಮಾಂತರ ಸೇರಿ ಕೆಲವೆಡೆ ಫ್ರೆಂಡ್ಲಿ ಫೈಟ್ ಮಾಡುತ್ತಿದ್ದೇವೆ. ಆದರೆ ಬಿಜೆಪಿ ರೀತಿ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದರು.
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಜೆಡಿಎಸ್ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದರು, ಆರ್ ಎಸ್ ಎಸ್ ಮುಖಂಡರೂ ಜೆಡಿಎಸ್ ವಿರುದ್ಧ ಟೀಕಿಸಿದ್ದರು. ಜೆಡಿಎಸ್ ಕೂಡ ಇದಕ್ಕೆ ತಿರುಗೇಟು ನೀಡಿತ್ತು. ಹೀಗಿದ್ದು ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿ ಈಗ ಜೆಡಿಎಸ್ ಜೊತೆಯೇ ಹೊಂದಾಣಿಕೆಗೆ ಮುಂದಾಗಿರುದು ವಿಪರ್ಯಾಸ. ಇದೆಲ್ಲವೂ ಬಿಜೆಪಿ ದುರ್ಬಲವಾಗಿದೆ ಎಂಬ ಸಂದೇಶ ರವಾನಿಸುತ್ತದೆ ಎಂದು ಹೇಳಿದರು.
ಹೊಂದಾಣಿಕೆ ಬಗ್ಗೆ ಸಿಎಂ ಬೊಮ್ಮಾಯಿಯವರು ಮಾತಾಡುತ್ತಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರು ಮಾತಾಡುತ್ತಿಲ್ಲ. ಬಿಜೆಪಿ ಉಳಿದ ಮುಖಂಡರು ಮಾತಾಡುತ್ತಿಲ್ಲ. ಯಡಿಯೂರಪ್ಪನವರು ಹೇಳಿದರು ಅಂತಾ ನಮ್ಮ ಜಿಲ್ಲೆಯಲ್ಲಂತೂ ಬಿಜೆಪಿಯವರು ಜೆಡಿಎಸ್ ಗೆ ವೋಟ್ ಹಾಕಲ್ಲ. ಯಡಿಯೂರಪ್ಪನವರು ಬೂಕನಕೆರೆಗೆ, ಮೈಸೂರಿಗೆ ಹೋಗಿ ಹೇಳಲಿ ನೋಡೋಣ. ಬಿಜೆಪಿಯವರು ಜೆಡಿಎಸ್ ಗೆ ವೋಟು ಹಾಕಿ ಅಂತಾ. ಹಾಕುತ್ತಾರೆಯೇ? ಎಂದು ಪ್ರಶ್ನಿಸಿದ ಡಿ.ಕೆ.ಶಿ ಎಲ್ಲೋ ಅಭ್ಯರ್ಥಿಗಳು ಇಲ್ಲದ ಕಡೆ ಹೇಳಬಹುದು. ಆದರೆ ಬಿಜೆಪಿಯವರು ಪ್ರತಿಷ್ಟೆ ಪಕ್ಕಕ್ಕಿಟ್ಟು ಬಿ ಎಸ್ ವೈ ಮಾತು ಕೇಳಲ್ಲ ಎಂದರು.