ಎರಡೂವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಆರೋಪದಡಿಯಲ್ಲಿ ಕೇವಲ 28 ದಿನಗಳ ಹಿಂದೆ ಜೈಲು ಸೇರಿದ್ದ ಆರೋಪಿಯನ್ನು ಗುಜರಾತ್ ಪೊಕ್ಸೋ ಕೋರ್ಟ್ ದೋಷಿ ಎಂದು ಘೋಷಣೆ ಮಾಡಿದೆ. ಹಾಗೂ ಇಂದು ಆರೋಪಿಗೆ ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ.
ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಪಿ.ಎಸ್. ಕಲಾ ವಾದ – ವಿವಾದಗಳನ್ನು ಆಲಿಸಿದ ಬಳಿಕ ವಲಸೆ ಕಾರ್ಮಿಕ ಯಾದವ್ನನ್ನು ದೋಷಿ ಎಂದು ತೀರ್ಪು ಪ್ರಕಟಿಸಿದ್ದಾರೆ. ಶಿಕ್ಷೆಯ ಪ್ರಮಾಣ ಇಂದು ಘೋಷಣೆಯಾಗಲಿದೆ.
ವಿಚಾರಣೆಯ ಕೊನೆಯ ದಿನದಂದು ಪಬ್ಲಿಕ್ ಪ್ರಾಸಿಕ್ಯೂಟರ್ ನಯನ್ ಸುಖದ್ವಾಲಾ ಅತ್ಯಾಚಾರಿಗೆ ಮರಣದಂಡನೆ ಶಿಕ್ಷೆ ನೀಡಬೇಕೆಂದು ಕೋರ್ಟ್ ಮುಂದೆ ಒತ್ತಾಯಿಸಿದರು. ಅಪರಾಧಿ ಯಾದವ್ ಮೂಲತಃ ಬಿಹಾರದವನಾಗಿದ್ದು ಸೂರತ್ ನಗರದ ಪಾಂಡೇಸರ ಎಂಬ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಿದ್ದ ಎನ್ನಲಾಗಿದೆ.
ಯಾದವ್ಗೆ ಮರಣದಂಡನೆ ಶಿಕ್ಷೆ ನೀಡಿದರೆ ಆತನ ಮಕ್ಕಳ ಭವಿಷ್ಯ ಅತಂತ್ರವಾಗಬಹುದು ಎಂದು ಯಾದವ್ ಪರ ವಕೀಲ ಕೋರ್ಟ್ ಮುಂದೆ ಹೇಳಿದ್ದಾರೆ. ಬಿಹಾರ ಮೂಲದ ವಲಸೆ ಕಾರ್ಮಿಕ ದಂಪತಿಯ ಎರಡೂವರೆ ವರ್ಷದ ಮಗುವನ್ನು ಅಪಹರಿಸಿದ್ದ ಯಾದವ್ ಆ ಮಗುವಿಗೆ ಲೈಂಗಿಕ ಕಿರುಕುಳ ನೀಡಿ ನವೆಂಬರ್ ನಾಲ್ಕರಂದು ಕೊಲೆಗೈದಿದ್ದನು. ಈ ಘಟನೆ ನಡೆದ ಕೇವಲ 28 ದಿನಗಳಲ್ಲಿ ಶಿಕ್ಷೆ ಪ್ರಕಟವಾದಂತಾಗಿದೆ.