ಮುಂಬೈ: ಓಮಿಕ್ರಾನ್ ಆತಂಕದ ನಡುವೆಯೇ ಸೌತ್ ಆಫಿಕಾದಲ್ಲಿ ನಡೆಯುವ ಕ್ರಿಕೆಟ್ ಸರಣಿಯ ವೇಳಾಪಟ್ಟಿ ಪ್ರಕಟವಾಗಿದೆ.
ಟೆಸ್ಟ್ ಹಾಗೂ ಏಕದಿನ ಸರಣಿಯ ವೇಳಾಪಟ್ಟಿ ಮಾತ್ರ ಪ್ರಕಟವಾಗಿದ್ದು, ಟಿ20 ಮುಂದೂಡುವ ಸಾಧ್ಯತೆ ಹೆಚ್ಚಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ಹೊಸ ರೂಪಾಂತರಿ ವೈರಸ್ ಓಮಿಕ್ರಾನ್ ನ ಆತಂಕ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಟಿ20 ಸರಣಿಯ ವೇಳಾಪಟ್ಟಿ ಪ್ರಕಟ ಮಾಡಿಲ್ಲ. ಪರಿಸ್ಥಿತಿ ನೋಡಿಕೊಂಡು ವೇಳಾಪಟ್ಟಿ ಪ್ರಕಟ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಮೊದಲು ಟೆಸ್ಟ್ ನಡಯಲಿದೆ. ಆ ನಂತರ ಏಕದಿನ ಪಂದ್ಯ ನಡೆಯಲಿದೆ. ಇದಾದ ನಂತರವೇ ಪರಿಸ್ಥಿತಿ ನೋಡಿಕೊಂಡು ಟಿ20 ಪಂದ್ಯದ ವೇಳಾಪಟ್ಟಿ ಪ್ರಕಟ ಮಾಡಲಾಗುವುದು ಎಂದು ಬಿಸಿಸಿಐ ತಿಳಿಸಿದೆ.
ಮೊದಲ ಟೆಸ್ಟ್ ಪಂದ್ಯವು ಡಿ. 26 ರಿಂದ 30ರ ವರೆಗೆ ನಡೆಯಲಿದೆ. ಈ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 1.30ರಿಂದ ಆರಂಭವಾಗಲಿದೆ. ಅಲ್ಲದೇ, ಸೆಂಚುರಿಯನ್ ಪಾರ್ಕ್ ಸ್ಟೇಡಿಯಂನಲ್ಲಿ ಮೊದಲ ಪಂದ್ಯ ನಡೆಯಲಿದೆ. ಎರಡನೇ ಟೆಸ್ಟ್ ಪಂದ್ಯ ಜನವರಿ 3 ರಿಂದ 7ರ ವರೆಗೆ ನಡೆಯಲಿದೆ. ಮೂರನೇ ಟೆಸ್ಟ್ ಪಂದ್ಯವು ಜನವರಿ 11 ರಿಂದ 15ರ ವರೆಗೆ ನಡೆಯಲಿದೆ.
ಟೆಸ್ಟ್ ಪಂದ್ಯಗಳು ಮುಗಿದ ನಂತರ ಏಕದಿನ ಸರಣಿ ಆರಂಭವಾಗಲಿದೆ. ಜನವರಿ 19ರಿಂದ ಏಕದಿನ ಪಂದ್ಯಗಳು ಆರಂಭವಾಗಲಿವೆ. ಎಲ್ಲ ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 2ಕ್ಕೆ ಆರಂಭವಾಗಲಿವೆ. ಮೊದಲ ಏಕದಿನ ಪಂದ್ಯ ಜನವರಿ 19ಕ್ಕೆ ನಡೆಯಲಿದೆ. ಆ ನಂತರ ಕ್ರಮವಾಗಿ ಜ. 21, 23ರಂದು ಎರಡು ಹಾಗೂ ಮೂರನೇ ಏಕದಿನ ಪಂದ್ಯಗಳು ನಡೆಯಲಿವೆ.