ಬೆಂಗಳೂರು: ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ವಿಳಂಬ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್ ಮೆಟ್ಟಿಲೇರಿದೆ. ರಾಜ್ಯ ಚುನಾವಣಾ ಆಯೋಗದಿಂದ ರಿಟ್ ಅರ್ಜಿ ಸಲ್ಲಿಕೆ ಮಾಡಲಾಗಿದೆ.
ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್ ವಿಂಗಡಣೆಗೆ ಸಂಬಂಧಿಸಿದಂತೆ ಆಯೋಗ ರಚಿಸಲಾಗಿದೆ. ಆಯೋಗ ವರದಿ ನೀಡಿದ ನಂತರವೇ ಚುನಾವಣೆ ನಡೆಯಬೇಕಿದೆ. ನಿಗದಿತ ಸಮಯಕ್ಕೆ ಜಿಪಂ, ತಾಪಂ ಚುನಾವಣೆ ನಡೆಸದೇ ಅನಗತ್ಯವಾಗಿ ವಿಳಂಬ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ರಾಜ್ಯ ಸರ್ಕಾರಕ್ಕೆ ಜಿಪಂ, ತಾಪಂ ಚುನಾವಣೆ ನಡೆಸಲು ಆಸಕ್ತಿ ಇಲ್ಲ. ಈ ವೇಳೆಗೆ ಚುನಾವಣೆ ನಡೆಸಬೇಕಿತ್ತು. ಕ್ಷೇತ್ರಗಳ ಮರುವಿಂಗಡಣೆಗೆ ಹೊಸ ಆಯೋಗ ರಚಿಸಲಾಗಿದೆ. ಅದು ವರದಿ ನೀಡಲು 6 ತಿಂಗಳಾಗುತ್ತೋ, ವರ್ಷವಾಗುತ್ತೋ ಎನ್ನುವ ಮಾತುಗಳು ವಿಪಕ್ಷದವರಿಂದ ಕೇಳಿ ಬಂದಿವೆ.
ಇದೇ ವೇಳೆ ರಾಜ್ಯ ಚುನಾವಣಾ ಆಯೋಗದಿಂದ ಜಿಪಂ, ತಾಪಂ ಚುನಾವಣೆ ವಿಳಂಬದ ಹಿನ್ನಲೆಯಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ. ಸಂವಿಧಾನದಡಿ ಚುನಾವಣೆಯನ್ನು ಮುಂದೂಡುವಂತಿಲ್ಲ. ಹಿಂದಿನಂತೆಯೇ ಜಿಪಂ ಮತ್ತು ತಾಪಂ ಕ್ಷೇತ್ರಗಳಿಗೆ ಚುನಾವಣೆ ನಡೆಸಬೇಕಿದೆ ಎಂದು ಆಯೋಗದಿಂದ ಮನವಿ ಮಾಡಲಾಗಿದೆ.
ಕ್ಷೇತ್ರ ಪುನರ್ ವಿಂಗಡಣೆಗೆ ಸರ್ಕಾರದಿಂದ ಆಯೋಗ ರಚಿಸಲಾಗಿದ್ದು, ಸರ್ಕಾರದ ಕ್ರಮವನ್ನು ರಾಜ್ಯ ಚುನಾವಣಾ ಆಯೋಗ ಪ್ರಶ್ನಿಸಿದೆ. ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ನೋಟಿಸ್ ಜಾರಿ ಮಾಡಿದೆ. ಆಯೋಗದ ಪರವಾಗಿಹಿರಿಯ ವಕೀಲ ಕೆ.ಎನ್. ಫಣೀಂದ್ರ ವಾದ ಮಂಡಿಸಿದರು.