ಮುಂಬೈ : ನ್ಯೂಜಿಲೆಂಡ್ ವಿರುದ್ಧ ನಡೆದ ಎರಡನೇ ಹಾಗೂ ಅಂತಿಮ ಟೆಸ್ಟ್ ನಲ್ಲಿ ಭಾರತ ಭರ್ಜರಿ ಜಯ ಸಾಧಿಸಿದೆ. ಆದರೆ, ಇದೇ ಪಂದ್ಯದಲ್ಲಿ ಇನ್ನಿಂಗ್ಸ್ ವೊಂದರಲ್ಲಿ 10 ವಿಕೆಟ್ ಪಡೆದ ಸಾಧನೆಯನ್ನು ನ್ಯೂಜಿಲೆಂಡ್ ನ ಅಜಾಜ್ ಪಟೇಲ್ ಮಾಡಿದ್ದರು. ಭಾರತೀಯ ಆಟಗಾರರು ಅವರನ್ನು ಗೌರವಯುತವಾಗಿ ಬೀಳ್ಕೊಟ್ಟಿದ್ದಾರೆ.
ಟೆಸ್ಟ್ ಕ್ರಿಕೆಟ್ ನ ಇತಿಹಾಸದಲ್ಲಿಯೇ ಇನ್ನಿಂಗ್ಸ್ ವೊಂದರಲ್ಲಿ 10 ವಿಕೆಟ್ ಗಳನ್ನು ಪಡೆದ ಮೂರನೇ ಬೌಲರ್ ಎಂಬ ಖ್ಯಾತಿಗೆ ಅಜಾಜ್ ಪಾತ್ರರಾಗಿದ್ದಾರೆ. ಇಂಗ್ಲೆಂಡ್ ನ ಜಿಮ್ ಲೇಕರ್ ಮತ್ತು ಭಾರತದ ಅನಿಲ್ ಕುಂಬ್ಳೆ ಅವರ ನಂತರ ಅಜಾಜ್ ಈ ದಾಖಲೆ ಬರೆದಿದ್ದಾರೆ. ಇವರ ಈ ಸಾಧನೆಯ ಮಧ್ಯೆಯೂ ನ್ಯೂಜಿಲೆಂಡ್ ಹೀನಾಯವಾಗಿ ಸೋಲು ಕಂಡಿದೆ.
ಆದರೂ ಭಾರತೀಯ ಆಟಗಾರರು ಮಾತ್ರ ಅಜಾಜ್ ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಇದೇ ಪಂದ್ಯದಲ್ಲಿ ಹಲವು ದಾಖಲೆಗಳಿಗೆ ಸಾಕ್ಷಿಯಾಗಿರುವ ಭಾರತೀಯ ಬೌಲರ್ ಆರ್. ಅಶ್ವಿನ್ ಅವರು ಅಜಾಜ್ ಅವರ ಸಂದರ್ಶನ ನಡೆಸಿದ್ದಾರೆ.
ಅಲ್ಲದೇ, ಭಾರತೀಯ ಆಟಗಾರರು ಸಹಿ ಹಾಕಿರುವ ಜೆರ್ಸಿಯನ್ನು ಕೂಡ ಈ ಸಂದರ್ಭದಲ್ಲಿ ಅಶ್ವಿನ್, ಅಜಾಜ್ ಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಕುರಿತು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ನಲ್ಲಿ ಫೋಟೋಗಳನ್ನು ಹಂಚಿಕೊಂಡಿದೆ.