
ದಾವಣಗೆರೆ: ವಿಧಾನ ಪರಿಷತ್ ಚುನಾವಣೆ ಮುಗಿದ ನಂತರ ರಾಜ್ಯದಲ್ಲಿ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಹಿನ್ನಲೆಯಲ್ಲಿ ಸಂಪುಟ ಸೇರಲು ಲಾಬಿಯೂ ಶುರುವಾಗಿದೆ.
ಹಿರಿಯರನ್ನು ತೆಗೆದು ಹೊಸಬರಿಗೆ ಸಂಪುಟದಲ್ಲಿ ಅವಕಾಶ ನೀಡಬೇಕೆಂದು ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ಹಿರಿಯರನ್ನು ತೆಗೆದು ಹೊಸಬರಿಗೆ ಸಂಪುಟದಲ್ಲಿ ಸ್ಥಾನ ಕೊಡಿ ಎಂದು ಹೇಳುವ ಮೂಲಕ ಹಿರಿಯ ಸಚಿವರಿಗೆ ಎಂಪಿ ರೇಣುಕಾಚಾರ್ಯ ಟಾಂಗ್ ಕೊಟ್ಟಿದ್ದಾರೆ.
2004, 2008 ಮತ್ತು 2018 ರಲ್ಲಿಯೂ ಅವರೇ ಸಂಪುಟದಲ್ಲಿದ್ದು, ಹೊಸಮುಖಗಳಿಗೆ, ಬೇರೆಯವರಿಗೆ ಅವಕಾಶ ಕೊಡಬೇಕು ಎಂದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಕುಂದೂರಿನಲ್ಲಿ ಮಾತನಾಡುತ್ತಾ ಹೇಳಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಮಾಡುವುದು ಸಿಎಂ ಪರಮಾಧಿಕಾರವಾಗಿದೆ. ಸಂಪುಟದಲ್ಲಿ ಸ್ಥಾನಕ್ಕಾಗಿ ನಾನು ಯಾವುದೇ ಲಾಬಿ ಮಾಡಲ್ಲ. ಸಕ್ರಿಯ ಕಾರ್ಯಕರ್ತನಾಗಿ ನಾನು ಕೆಲಸ ಮಾಡುತ್ತೇನೆ. ಆದರೆ, ಬೇರೆಯವರಿಗೆ ಅವಕಾಶ ನೀಡಿ ಎಂದು ಕೇಳುತ್ತೇವೆ. ಅದರಲ್ಲೂ ಹೊಸಬರಿಗೆ ಅವಕಾಶ ನೀಡಿದರೆ ಒಳ್ಳೆಯದು ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.