ಭಾರತದಲ್ಲಿ ಮದುವೆಗಳು ಎಂದರೆ ಭರ್ಜರಿ ಭೋಜನಕೂಟದ ಭೂರೀ ಕಾರ್ಯಕ್ರಮಗಳು ಎಂದೇ ಅರ್ಥ. ಮದುವೆ ಸಮಾರಂಭಗಳಿಗೆ ಬರುವ ಅತಿಥಿಗಳಿಗೆ ಬಗೆಬಗೆಯ ಭಕ್ಷ್ಯಗಳನ್ನು ಉಣಬಡಿಸುವುದು ಎಂದರೆ ವಧುವರರ ಕುಟುಂಬಗಳಿಗೆ ಪ್ರತಿಷ್ಠೆಯ ವಿಚಾರ. ಈ ಪ್ರತಿಷ್ಠೆಯ ತೋರಿಕೆಯ ಆಟದಲ್ಲಿ ಹತ್ತಾರು ಬಗೆಯ ಭಕ್ಷ್ಯಗಳನ್ನು ಸಿದ್ಧಪಡಿಸಿ, ಕೊನೆಗೆ ಅತಿಥಿಗಳು ತಿನ್ನಲಾರದೇ ಬಿಟ್ಟು ಊಟವೆಲ್ಲಾ ವ್ಯರ್ಥವಾಗುವುದನ್ನು ನಾವೆಲ್ಲಾ ಸಾಮಾನ್ಯ ಸಂಗತಿ ಎಂಬಂತೆ ಒಪ್ಪಿಬಿಟ್ಟಿದ್ದೇವೆ.
ಹೀಗೆ ದೊಡ್ಡ ಪ್ರಮಾಣದಲ್ಲಿ ಮದುವೆಯ ಊಟ ವ್ಯರ್ಥವಾಗುವುದು ಬಹಳಷ್ಟು ಜನರಿಗೆ ಬೇಸರ ತರುವ ಸಂಗತಿಯಾಗಿದೆ. ಇಂಥ ಪರಿಸ್ಥಿತಿಯನ್ನು ಬಹುತೇಕರು ಅಸಹಾಯಕರಾಗಿ ನೋಡಿಕೊಂಡು ಬರುತ್ತಿರುವ ನಡುವೆಯೇ ಇಲ್ಲೊಬ್ಬ ಬೆಂಗಾಲಿ ಮಹಿಳೆ, ಮದುವೆ ಸಮಾರಂಭವೊಂದರಲ್ಲಿ ಮಿಕ್ಕುವ ಊಟವನ್ನು ಅಗತ್ಯವಿದ್ದ ಮಂದಿಗೆ ವಿತರಿಸುವ ಮೂಲಕ ಆದರ್ಶಪ್ರಾಯರಾಗಿದ್ದಾರೆ.
ಈ ಕೆಲಸ ಮಾಡಿದ್ರೆ ಚುರುಕಾಗುತ್ತೆ ಬುದ್ದಿ
ನಸುಗೆಂಪು ಸೀರೆಯಲ್ಲಿ ಚಿನ್ನಾಭರಣದಲ್ಲಿ ಕಂಗೊಳಿಸುತ್ತಿರುವ ಈ ಮಹಿಳೆಯ ಸತ್ಕಾರ್ಯದ ಚಿತ್ರವೊಂದನ್ನು ಮದುವೆ ಛಾಯಾಗ್ರಾಹಕ ನೀಲಾಂಜನ್ ಮೊಂಡಲ್ ಫೇಸ್ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಮಹಿಳೆ ತನ್ನ ಸಹೋದರನ ವಿವಾಹ ಕಾರ್ಯಕ್ರಮದ ಊಟವನ್ನು ಬಡವರಿಗೆ ವಿತರಿಸಿದ್ದಾರೆ.
ಕೋಲ್ಕತ್ತಾ ಉಪನಗರ ರೈಲ್ವೇ ನಿಲ್ದಾಣದ ಬಳಿ ಡಿಸೆಂಬರ್ 1ರಂದು ಈ ಘಟನೆ ಜರುಗಿದೆ. ಮದುವೆಯಲ್ಲಿ ಉಳಿದ ಊಟವನ್ನು ಅಗತ್ಯವಿದ್ದ ಜನರಿಗೆ ಪೇಪರ್ ತಟ್ಟೆಗಳಲ್ಲಿ ವಿತರಿಸುತ್ತಿರುವ ಮಹಿಳೆಯನ್ನು ಚಿತ್ರದಲ್ಲಿ ನೋಡಬಹುದಾಗಿದೆ. ಪ್ಲೇಟ್‌ಗಳಲ್ಲಿ ರೋಟಿ, ದಾಲ್, ಸಬ್ಜಿ, ಅನ್ನ ಸೇರಿದಂತೆ ಥರಾವರಿ ಭಕ್ಷ್ಯಗಳಿವೆ.