ಮಾಜಿ ಪತಿ ನಾಗ ಚೈತನ್ಯರಿಂದ ಪ್ರತ್ಯೇಕಗೊಂಡ ನಟಿ ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಜೀವನದಲ್ಲಿ ಬಂದಿದ್ದನ್ನು ಒಪ್ಪುವ ವಿಚಾರವಾಗಿ ಅಮೆರಿಕನ್ ಲೇಖಕ ಚೆರಿಲ್ ಸ್ಟ್ರೇಯ್ಡ್‌ರ ಕೋಟ್‌ಅನ್ನು ಶೇರ್ ಮಾಡಿದ್ದಾರೆ ಸಮಂತಾ.
“ಬಹುತೇಕ ವಿಚಾರಗಳು ನಿಧಾನವಾಗಿ ಸರಿಯಾಗುತ್ತವೆ, ಆದರೆ ಎಲ್ಲ ವಿಚಾರವೂ ಅಲ್ಲ. ಕೆಲವೊಮ್ಮೆ ನೀವು ಒಳ್ಳೆಯ ಹೋರಾಟ ನೀಡಿ ಸೋಲುತ್ತೀರಿ. ನೀವು ಬಹಳ ಕಷ್ಟಪಟ್ಟು ಸಹಿಸಿಕೊಂಡಿದ್ದೂ ಬಿಟ್ಟುಬಿಡದೇ ಬೇರೆ ಆಯ್ಕೆ ಇಲ್ಲ ಎಂದು ಅರಿಯುತ್ತೀರಿ. ಒಪ್ಪಿಕೊಳ್ಳುವುದು ಒಂದು ಸಣ್ಣ, ಶಾಂತವಾದ ಕೋಣೆ,” ಎಂಬ ಅರ್ಥದ ಈ ಕೋಟ್‌ಅನ್ನುಇನ್‌ಸ್ಟಾಗ್ರಾಂನಲ್ಲಿ ಸಮಂತಾ ಶೇರ್ ಮಾಡಿಕೊಂಡಿದ್ದಾರೆ.
ನಾಗ ಚೈತನ್ಯರಿಂದ ಬೇರ್ಪಡುತ್ತಲೇ ತಮ್ಮ ಸ್ನೇಹಿತೆ ಶಿಲ್ಪಾ ರೆಡ್ಡಿಯೊಂದಿಗೆ ಚಾರ್ ಧಾಮ್ ಯಾತ್ರೆಗೆ ಹೋಗಿದ್ದಾರೆ ಸಮಂತಾ. ತಮ್ಮ ಆಧ್ಯಾತ್ಮಿಕ ಪಯಣದ ಕುರಿತು ಎಲ್ಲೆ ವೃತ್ತಪತ್ರಿಕೆಯೊಂದಿಗೆ ಮಾತನಾಡಿದ ಸಮಂತಾ, “ನಾನು ಅಂದುಕೊಂಡಂತೆಯೇ ಎಲ್ಲವೂ ಇತ್ತು, ಅಥವಾ ಅದಕ್ಕಿಂತ ಹೆಚ್ಚಾಗಿಯೇ ಇತ್ತು. ಕೆಲವೊಂದು ವಿಚಾರಗಳು ನಿಮ್ಮನ್ನು ಎಂದೆಂದಿಗೂ ಬದಲಿಸಿಬಿಡುತ್ತವೆ. ನನಗೆ ದೇವರು ಜೀವನದಲ್ಲಿ ಮುಂದುವರೆಯಲು ಸಾಕಷ್ಟು ಶಕ್ತಿ ಕೊಟ್ಟಿದ್ದಾನೆ ಎಂದು ನಂಬಿದ್ದೇನೆ. ಲಾಕ್‌ಡೌನ್ ಅವಧಿಯಲ್ಲಿ ನಾನು ಧ್ಯಾನವನ್ನೂ ಮಾಡಲು ಆರಂಭಿಸಿದ್ದೇನೆ,” ಎಂದಿದ್ದಾರೆ ಸಮಂತಾ.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ಮಾಡಲಾಗುವ ಟ್ರೋಲ್‌ಗಳ ಬಗ್ಗೆ ಮಾತನಾಡಿದ ಸಮಂತಾ, ವಿಚ್ಛೇದನದ ಕಾರಣದಿಂದ ತಮ್ಮನ್ನು ಗುರಿಯಾಗಿಸಿ ಮಾಡುತ್ತಿರುವ ವ್ಯಂಗ್ಯಗಳ ಕುರಿತು ಮಾತನಾಡಿದ್ದು, “ಷರತ್ತುರಹಿತವಾಗಿ ಒಪ್ಪಬೇಕು ಎಂದು ನಾನು ಕೇಳುವುದಿಲ್ಲ. ಭಿನ್ನವಾದ ಅಭಿಪ್ರಾಯಗಳನ್ನು ಹೊಂದಲು ನಾನು ಜನರಿಗೆ ಉತ್ತೇಜನ ನೀಡುತ್ತೇನೆ, ಆದರೂ ಸಹ ನಾವೆಲ್ಲಾ ಪರಸ್ಪರ ಪ್ರೀತಿಸಿಕೊಂಡು, ಒಬ್ಬರಿಗೊಬ್ಬರು ಕಾಳಜಿ ಮಾಡಿಕೊಂಡು ಇರಬಹುದು. ತಮ್ಮ ನಿರಾಸೆಯನ್ನು ನಾಗರಿಕ ರೀತಿಯಲ್ಲಿ ವ್ಯಕ್ತಪಡಿಸಲು ನಾನು ಅವರಲ್ಲಿ ಕೋರುತ್ತೇನೆ,” ಎಂದು ಹೇಳಿಕೊಂಡಿದ್ದಾರೆ.