ಮುಂಬೈ: ನೌಕಾಪಡೆಯ ದಿನದಂದು, ಭಾರತೀಯ ನೌಕಾಪಡೆಯು ಶನಿವಾರ ಇಲ್ಲಿನ ಪಶ್ಚಿಮ ನೌಕಾ ಕಮಾಂಡ್‌ನಲ್ಲಿ ಐಕಾನಿಕ್ ಗೇಟ್‌ವೇ ಆಫ್ ಇಂಡಿಯಾದ ಎದುರು ವಿಶ್ವದ ಅತಿದೊಡ್ಡ ರಾಷ್ಟ್ರಧ್ವಜವನ್ನು ಪ್ರದರ್ಶಿಸಿದೆ. ಖಾದಿಯಿಂದ ಮಾಡಿದ ಭಾರತೀಯ ತ್ರಿವರ್ಣ, 225 ಉದ್ದ ಮತ್ತು 150 ಅಡಿ ಅಗಲವನ್ನು ಹೊಂದಿದೆ. ಇದು 1.40 ಟನ್ (ಸುಮಾರು 1,400 ಕೆಜಿ) ತೂಕವನ್ನು ಹೊಂದಿದೆ.
ಭಾರತ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ಭಾಗವಾಗಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು ಈ ತ್ರಿವರ್ಣ ಧ್ವಜವನ್ನು ವಿನ್ಯಾಸಗೊಳಿಸಿದೆ ಹಾಗೂ ತಯಾರಿಸಿದೆ.
ಪ್ರಧಾನಿ ನರೇಂದ್ರ ಮೋದಿ, ನೌಕಾಪಡೆಯ ದಿನದ ಶುಭಾಶಯಗಳನ್ನು ತಿಳಿಸಿದ್ದಾರೆ. ಜೊತೆಗೆ ನೌಕಾಪಡೆಯ ಸಿಬ್ಬಂದಿಯ ಅತ್ಯುತ್ತಮ ಧೈರ್ಯ ಮತ್ತು ವೃತ್ತಿಪರತೆಯನ್ನು ಶ್ಲಾಘಿಸಿದ್ದಾರೆ. ಭಾರತೀಯ ನೌಕಾಪಡೆಯ ಅನುಕರಣೀಯ ಕೊಡುಗೆಗಳ ಬಗ್ಗೆ ಹೆಮ್ಮೆಪಡುತ್ತೇವೆ. ನಮ್ಮ ನೌಕಾಪಡೆಯು ಅದರ ವೃತ್ತಿಪರತೆ ಮತ್ತು ಅತ್ಯುತ್ತಮ ಧೈರ್ಯಕ್ಕಾಗಿ ಗೌರವಿಸಲ್ಪಟ್ಟಿದೆ. ನೈಸರ್ಗಿಕ ವಿಕೋಪಗಳಂತಹ ಬಿಕ್ಕಟ್ಟಿನ ಸಂದರ್ಭಗಳನ್ನು ನಿರ್ವಹಿಸುವಲ್ಲಿ ನೌಕಾಪಡೆಯ ಸಿಬ್ಬಂದಿ ಯಾವಾಗಲೂ ಮುಂಚೂಣಿಯಲ್ಲಿರುತ್ತಾರೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ನೌಕಾಪಡೆಯ ದಿನವನ್ನು ಪ್ರತಿವರ್ಷ ಡಿಸೆಂಬರ್ 4 ರಂದು ಆಚರಿಸಲಾಗುತ್ತದೆ. 1971 ರಲ್ಲಿ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ಭಾರತೀಯ ನೌಕಾಪಡೆಯು ಆಪರೇಷನ್ ಟ್ರೈಡೆಂಟ್ ಅನ್ನು ಕೈಗೊಂಡಿತ್ತು. ಇದರಲ್ಲಿ ನೌಕಾಪಡೆಯ ಕ್ಷಿಪಣಿ ದೋಣಿಗಳು ಶತ್ರು ಹಡಗುಗಳನ್ನು ಹಿಮ್ಮೆಟ್ಟಿಸಲು ಸಾಹಸಮಯ ದಾಳಿಯನ್ನು ನಡೆಸಿತ್ತು.