ಭುವನೇಶ್ವರ: ಎಲ್ಲೆಂದರಲ್ಲಿ ಬೇಕಾಬಿಟ್ಟಿ ಕಸ ಎಸೆಯುವುದು ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿ-ಪಕ್ಷಿ, ಸರೀಸೃಪಗಳಿಗೂ ಕೂಡ ಮಾರಕವಾಗಿದೆ. ಭೂ ಮಾಲಿನ್ಯವು ಜೀವಿಗಳಿಗೆ ವಿವಿಧ ರೀತಿಯಲ್ಲಿ ಹಾನಿಯನ್ನುಂಟು ಮಾಡುತ್ತದೆ. ಇಲ್ಲೊಂದೆಡೆ ಎಸೆದ ಬಿಯರ್ ಬಾಟಲ್ ಒಳಗೆ ನಾಗರಹಾವಿನ ತಲೆಸಿಲುಕಿಕೊಂಡು ಒದ್ದಾಡಿರುವ ಘಟನೆ ನಡೆದಿದೆ.
ಒಡಿಶಾದ ಪುರಿಯಲ್ಲಿ ಈ ಘಟನೆ ನಡೆದಿದ್ದು, 4 ಅಡಿ ಉದ್ದದ ನಾಗರಹಾವಿನ ತಲೆ ಬಿಯರ್ ಕ್ಯಾನ್‌ನೊಳಗೆ ಸೇರಿಕೊಂಡಿದೆ. ಇದರಿಂದ ಹೊರಬರಲಾರದೆ ಅದು ಸಾಕಷ್ಟು ಹೆಣಗಾಡಿದೆ. ವರದಿಗಳ ಪ್ರಕಾರ ಮಾಧಿಪುರ ಗ್ರಾಮದ ಸ್ಥಳೀಯರು ಈ ಸರೀಸೃಪವನ್ನು ಗುರುತಿಸಿದ್ದಾರೆ.
ಎಸೆದ ಬಿಯರ್ ಕ್ಯಾನ್‌ನೊಳಗೆ ನಾಗರ ಹಾವಿನ ತಲೆ ಸಂಪೂರ್ಣವಾಗಿ ಸಿಲುಕಿಕೊಂಡಿದ್ದರಿಂದ ಉರಗ ತಜ್ಞರು ರಕ್ಷಣಾ ಕಾರ್ಯ ನಡೆಸಬೇಕಾಯಿತು. ಹಾವು ಹಿಡಿಯುವ ನಿಪುಣ ವ್ಯಕ್ತಿಯು, ಉರಗವನ್ನು ಚೀಲದೊಳಗೆ ಹಾಕುವಲ್ಲಿ ಯಶಸ್ವಿಯಾಗಿದ್ದಾನೆ. ನಂತರ ತನ್ನ ಕಚೇರಿಗೆ ತೆಗೆದುಕೊಂಡು ಹೋಗಿ ಅಲ್ಲಿ, ಮೊದಲಿಗೆ ಬಿಯರ್ ಡಬ್ಬದ ಒಂದು ಬದಿಯನ್ನು ಕತ್ತರಿಸಿದ್ದಾನೆ. ಈ ವೇಳೆ ಹಾವಿನ ತಲೆ ಹೊರಬಂದಿದ್ದು, ಕೂಡಲೇ ಸುರಕ್ಷತಾ ದೃಷ್ಟಿಯಿಂದ ತೆರೆದ ಪ್ಲ್ಯಾಸ್ಟಿಕ್ ಟ್ಯೂಬ್ ಒಳಕ್ಕೆ ಹಾವಿನ ತಲೆಯನ್ನು ಸೇರಿಸಲಾಗುತ್ತದೆ.
ನಾಗರಾಜನ ತಲೆಯು ಸಂಪೂರ್ಣವಾಗಿ ಟ್ಯೂಬ್‌ನೊಳಗೆ ಹೋದ ನಂತರ, ತಜ್ಞರು ಉರಗವನ್ನು ಸಂಪೂರ್ಣವಾಗಿ ಮುಕ್ತಗೊಳಿಸಲು ಬಾಟಲಿಯನ್ನು ಕತ್ತರಿಸಿದ್ದಾರೆ. ಹಾವನ್ನು ಬಿಡಿಸಲು ತಜ್ಞರು 20 ನಿಮಿಷಗಳ ಸಮಯ ತೆಗೆದುಕೊಂಡಿದ್ದು, ಅದರ ಗಾಯಗಳಿಗೆ ಚಿಕಿತ್ಸೆ ನೀಡಿದ ನಂತರ ಕಾಡಿಗೆ ಬಿಡಲಾಯಿತು.
ಜೂನ್‌ನಲ್ಲಿ ಒಡಿಶಾದ ಮಯೂರ್‌ಭಂಜ್‌ನಲ್ಲಿ 8 ಅಡಿ ಉದ್ದದ ಕಾಳಿಂಗ ಸರ್ಪವನ್ನು ಮಹಿಳೆಯೊಬ್ಬರು ರಕ್ಷಿಸಿದ್ದರು.