ಹುಬ್ಬಳ್ಳಿ: ಸಿಎಂ ಬದಲಾವಣೆ ಬಗ್ಗೆ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ಹೇಳಿಕೆ ಬಗ್ಗೆ ಮಾತನಾಡಿದ ಅವರು, ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದಂತೆ ಸಿಎಂ ಬದಲಾವಣೆ ಆಗಲ್ಲ. 2023ರ ವರೆಗೂ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿರುತ್ತಾರೆ ಎಂದು ತಿಳಿಸಿದ್ದಾರೆ.
ಈಶ್ವರಪ್ಪ ಶೀಘ್ರದಲ್ಲೇ ನಿರಾಣಿ ಮುಖ್ಯಮಂತ್ರಿ ಸ್ಥಾನಕ್ಕೆ ಏರಲಿದ್ದಾರೆ ಎಂದು ಹೇಳಿಲ್ಲ. ಆದರೂ, ಆ ರೀತಿ ಹೇಳುವುದು ಸರಿಯಲ್ಲ. ಇಂತಹ ಹೇಳಿಕೆ ನೀಡದಂತೆ ಈಶ್ವರಪ್ಪ ಸೇರಿ ರಾಜ್ಯದ ಎಲ್ಲ ಮುಖಂಡರಿಗೆ ಕೇಂದ್ರದಿಂದ ಸೂಚನೆ ನೀಡಲಾಗಿದೆ. ಸದ್ಯಕ್ಕೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗಲ್ಲ. 2023 ರ ವರೆಗೂ ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ತಿಳಿಸಿದ್ದಾರೆ.
ಗುತ್ತಿಗೆದಾರರ ಸಂಘದಿಂದ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಇದು ಆಧಾರರಹಿತ ಆರೋಪವಾಗಿದೆ. ಗುತ್ತಿಗೆದಾರರು ಸಾಕ್ಷ್ಯ ಕೊಟ್ಟರೆ ಅದನ್ನು ತನಿಖೆ ಮಾಡಿಸೋಣ. ಪ್ರಧಾನಿ ಮೋದಿ ಸರ್ಕಾರದಲ್ಲಿ ಭ್ರಷ್ಟಾಚಾರ ಸಹಿಸುವುದಿಲ್ಲ ಎಂದು ಹೇಳಿದ್ದಾರೆ.