ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿನ 500 ರೆಸ್ಟೋರೆಂಟ್‌ಗಳಲ್ಲಿ ‘ಹರ್ಬಲ್ ಫ್ಲೇವರ್ಡ್ ಹುಕ್ಕಾ’ಗಳನ್ನು ಮಾರಾಟ ಮಾಡಲು ದೆಹಲಿ ಹೈಕೋರ್ಟ್ ಅನುಮತಿ ನೀಡಿದೆ.
ಬಿಸಾಡಬಹುದಾದ ಪೈಪ್‌ಗಳನ್ನು ಬಳಸಬೇಕು ಮತ್ತು ಕೋವಿಡ್ -19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕಿದೆ ಎಂದು ಹೇಳಲಾಗಿದೆ. ಹೈಕೋರ್ಟ್ ನ್ಯಾಯಮೂರ್ತಿ ಪ್ರತೀಕ್ ಜಲನ್ ಅವರ ಪೀಠದಿಂದ ನೀಡಲಾದ ಆದೇಶದ ಪ್ರಕಾರ, ದೆಹಲಿ ನಗರದಲ್ಲಿರುವ ಸುಮಾರು 500 ಸದಸ್ಯರ ಸಂಘವಾದ ನ್ಯಾಷನಲ್ ರೆಸ್ಟೊರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾಕ್ಕೆ ಮಧ್ಯಂತರ ಪರಿಹಾರವನ್ನು ನೀಡಲಾಗಿದೆ.
ವಿವಿಧ ವೈಯಕ್ತಿಕ ರೆಸ್ಟೋರೆಂಟ್ ಗಳಿಂದ ಇದೇ ರೀತಿ ಸಲ್ಲಿಕೆಯಾದ ಅರ್ಜಿಗಳನ್ನು ನ್ಯಾಯಾಲಯ ಪರಿಗಣಿಸಿದೆ ಎಂದು ರೆಸ್ಟೋರೆಂಟ್ ಮಾಲೀಕರನ್ನು ಪ್ರತಿನಿಧಿಸುವ ವಕೀಲರಾದ ಪಿಎಸ್ ಸಿಂಗಲ್ ಮತ್ತು ಸತೇಂದರ್ ಕುಮಾರ್ ಅವರೊಂದಿಗೆ ಹಿರಿಯ ವಕೀಲ ವಿಕೆ ಗಾರ್ಗ್ ತಿಳಿಸಿದ್ದಾರೆ.
ಬಳಸಲಾಗುವ ಹುಕ್ಕಾಗಳಲ್ಲಿ ನಿಕೋಟಿನ್ ಅಥವಾ ತಂಬಾಕು ಇರುವುದಿಲ್ಲ ಎಂಬ ಹೆಚ್ಚುವರಿ ಷರತ್ತನ್ನು ಸೇರಿಸಲಾಗಿದೆ ಎಂದು ದೆಹಲಿ ಸರ್ಕಾರದ ಪರ ವಾದ ಮಂಡಿಸಿದ ಸ್ಥಾಯಿ ವಕೀಲ ಸಂತೋಷ್ ಕುಮಾರ್ ತ್ರಿಪಾಠಿ ನ್ಯಾಯಾಲಯಕ್ಕೆ ತಿಳಿಸಿದರು.
ಕೋವಿಡ್ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ನಿರ್ಬಂಧಗಳು ಶಾಶ್ವತವಾಗಿ ಮುಂದುವರಿಯಲು ಸಾಧ್ಯವಿಲ್ಲ. ಅಲ್ಲದೇ ಇದು ಜೀವನೋಪಾಯದ ವೆಚ್ಚದಲ್ಲಿ ಇರುವಂತಿಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿದೆ. ಅರ್ಜಿಗಳನ್ನು ವಿರೋಧಿಸಿದ್ದ ದೆಹಲಿ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಹುಕ್ಕಾ ಮಾರಾಟಕ್ಕೆ ಅನುಮತಿಸುವುದರಿಂದ, ಜನರು ಅದನ್ನು ಹಂಚಿಕೊಳ್ಳುವುದರಿಂದ ಸೋಂಕು ಹರಡಬಹುದು ಎಂದು ಹೇಳಿತ್ತು.