ನವದೆಹಲಿ : ರಾಷ್ಟ್ರ ರಾಜಧಾನಿಯ ವಾಯುಮಾಲಿನ್ಯ ಕಲುಷಿತ ವಿಷಯಕ್ಕೆ ಸಂಬಂಧಿಸಿದಂತೆ ನಾವು ಶಾಲೆಗಳನ್ನು ಮುಚ್ಚಿ ಎಂದು ಆದೇಶ ನೀಡಿಲ್ಲ. ಆದರೆ, ನಮ್ಮನ್ನು ಖಳನಾಯಕರಂತೆ ಬಿಂಬಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಬೇಸರ ವ್ಯಕ್ತಪಡಿಸಿದೆ.
ವಿಚಾರಣೆ ಸಂದರ್ಭದಲ್ಲಿ ನಾವೇನು ದೆಹಲಿ ಶಾಲೆಗಳನ್ನು ಬಂದ್ ಮಾಡುವಂತೆ ಆದೇಶ ನೀಡಿರಲಿಲ್ಲ. ಶಾಲೆಗಳನ್ನು ಪುನರ್ ತೆರೆಯುವ ವಿಚಾರದ ಕುರಿತು ಸರ್ಕಾರದ ನಿಲುವಿನಲ್ಲಿ ಆದ ಬದಲಾವಣೆಗಳಿಗೆ ಕಾರಣ ಏನು? ಎಂಬುವುದನ್ನಷ್ಟೇ ಮಾತ್ರ ಸರ್ಕಾರಕ್ಕೆ ಕೇಳಿದ್ದೇವೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ದೆಹಲಿಯಲ್ಲಿ ವಾಯು ಮಾಲಿನ್ಯ ಕಲುಷಿತಗೊಂಡ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರವು ಶುಕ್ರವಾರ ಶಾಲಾ –ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಹೀಗಾಗಿ ಸುಪ್ರೀಂ ಕೋರ್ಟ್ ಛಾಟಿ ಬೀಸಿದ ನಂತರ ಸರ್ಕಾರ ಶಾಲೆಗಳಿಗೆ ರಜೆ ನೀಡಿದೆ ಎಂದು ಹೇಳಲಾಗಿತ್ತು.
ಸರ್ಕಾರಿ ನೌಕರರು ಮನೆಯಿಂದ ಕೆಲಸ ಮಾಡುತ್ತಿದ್ದಾರೆ. ಶಾಲೆ ಮಕ್ಕಳು ಏಕೆ ಬರುತ್ತಿದ್ದಾರೆ ಎಂದು ಕೋರ್ಟ್ ಸರ್ಕಾರಕ್ಕೆ ಪ್ರಶ್ನೆ ಕೇಳಿದೆ ಎಂದು ಹೇಳಲಾಗಿತ್ತು. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟನೆ ನೀಡಿದ್ದು, ಶಾಲೆಗಳನ್ನು ಪುನರ್ ತೆರೆಯುವ ವಿಚಾರದಲ್ಲಿ ಸರ್ಕಾರದ ನಿಲುವು ಬದಲಾಗಿದ್ದೇಕೆ ? ಎಂದು ಪ್ರಶ್ನಿಸಲಾಗಿದೆಯೇ ಹೊರತು, ಶಾಲೆ ಮುಚ್ಚಲು ಹೇಳಿಲ್ಲ ಎಂದು ಕೋರ್ಟ್ ಸ್ಪಷ್ಟನೆ ನೀಡಿದೆ.