ದೇಶದಲ್ಲಿ ಮೊದಲ ಒಮಿಕ್ರಾನ್ ರೂಪಾಂತರಿ ವೈರಸ್ ಪತ್ತೆಯಾಗಿದ್ದು, ರಾಜ್ಯದ ಇಬ್ಬರಿಗೆ ಈ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ರಾಜ್ಯದಾದ್ಯಂತ ಮುಂದೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚೆ ನಡೆಯುತ್ತಿದೆ. ಇದರ ಮಧ್ಯೆ ಇಂದು ನವದೆಹಲಿಯಿಂದ ಬೆಂಗಳೂರಿಗೆ ಮರಳಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಹತ್ವದ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿನೋಮ್ ಸೀಕ್ವೆನ್ಸಿಂಗ್ ಮೂಲಕ ಈಗ ಪತ್ತೆಯಾಗಿರುವ ಒಮಿಕ್ರಾನ್ ರೂಪಾಂತರಿ ತಳಿಗೆ ಯಾವ ರೀತಿಯ ಔಷಧ ಹಾಗೂ ಚಿಕಿತ್ಸಾ ನಿಯಮಗಳನ್ನು ಪಾಲಿಸಬೇಕೆನ್ನುವ ಕುರಿತು ಇಂದು ತಜ್ಞರೊಂದಿಗೆ ಸಭೆ ನಡೆಸಿ ಮಾಹಿತಿ ಪಡೆಯಲಾಗುತ್ತದೆ ಎಂದಿದ್ದಾರೆ.
ಸೋಂಕಿತರೊಂದಿಗೆ ಪ್ರಥಮ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚುವ ಕಾರ್ಯ ಈಗಾಗಲೇ ನಡೆದಿದೆ. ಇದರ ಜೊತೆಗೆ ಇಂದು ನಡೆಯುವ ತಜ್ಞರ ಸಭೆಯಲ್ಲಿ ವಿವಿಧ ದೇಶಗಳಲ್ಲಿ ಒಮಿಕ್ರಾನ್ ನಿಯಂತ್ರಣಕ್ಕೆ ಯಾವ್ಯಾವ ವಿಧಾನ ಅನುಸರಿಸಲಾಗುತ್ತಿದೆ ಎಂಬುದರ ಕುರಿತು ಚರ್ಚೆ ನಡೆಸಲಾಗುವುದು. ಬಳಿಕ ರಾಜ್ಯದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಂತಿಮ ನಿರ್ಧಾರಕ್ಕೆ ಬರಲಾಗುತ್ತದೆ ಎಂದು ತಿಳಿಸಿದ್ದಾರೆ.