ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಪರವಾಗಿ ಮಾತನಾಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಾಂತಾ ಬಿಸ್ವಾ ಶರ್ಮಾ, ಭಾರತದ ಹೊರಗೆ ತೊಂದರೆಯಲ್ಲಿ ಸಿಲುಕಿರುವ ಹಿಂದೂಗಳು ದೇಶಕ್ಕೆ ಬರಲು ಸ್ವಾಗತ ಕೋರುವುದಾಗಿ ತಿಳಿಸಿದ್ದಾರೆ.
ಭಾರತವು ಹಿಂದೂ ಬಾಹುಳ್ಯದ ದೇಶವಾಗಿದ್ದು, ಬಾಬರ್‌ನ ಕಾಲಕ್ಕೂ ಮುಂಚೆ ಇಲ್ಲಿನವರೆಲ್ಲಾ ಹಿಂದೂಗಳೇ ಆಗಿದ್ದರು ಎಂದ ಶರ್ಮಾ, “ಭಾರತ ಹಿಂದೂ ಬಹುಸಂಖ್ಯಾತ ದೇಶ. ಭಾರತದ ಹೊರಗಿರುವ ಯಾವುದೇ ಹಿಂದೂ ತೊಂದರೆ ಅನುಭವಿಸುತ್ತಿದ್ದಲ್ಲಿ ಆತ ಭಾರತಕ್ಕೆ ಬರಲು ಸ್ವಾಗತ ಕೋರುತ್ತೇನೆ. ಬಾಬರ್‌ನ ಕಾಲಕ್ಕೂ ಮುಂಚೆ ಭಾರತದಲ್ಲಿದ್ದ ಎಲ್ಲರೂ ಹಿಂದೂಗಳೇ ಆಗಿದ್ದರು” ಎಂದಿದ್ದಾರೆ.
ಇದೇ ವೇಳೆ ದೇಗುಲ ನಿರ್ಮಾಣದ ಕೆಲಸವನ್ನು ಕೋಮುವಾದವೆಂದು ದೇಶದಲ್ಲಿ ನೋಡುತ್ತಿರುವುದೇಕೆ ಎಂದು ಪ್ರಶ್ನಿಸಿದ ಶರ್ಮಾ, “ಬರೀ ದೇಗುಲ ನಿರ್ಮಾಣದ ಕೆಲಸವನ್ನು ಮಾತ್ರವೇ ಏಕೆ ಭಾರತದಲ್ಲಿ ಕೋಮುವಾದದ ದೃಷ್ಟಿಯಿಂದ ನೋಡಬೇಕು ? ನಾವು ಹಿಂದೂಗಳು, ಹಿಂದೂಗಳೇ ಆಗಿ ಉಳಿಯುತ್ತೇವೆ. ಒಬ್ಬ ಹಿಂದೂವಾಗಿ ನಾನು ಮಿಕ್ಕೆಲ್ಲಾ ಜಾತ್ಯತೀತರಿಗಿಂತಲೂ ಹೆಚ್ಚು ಜಾತ್ಯತೀತ,” ಎಂದಿದ್ದಾರೆ.
ಇದೇ ವೇಳೆ, ಅಸ್ಸಾಂನಲ್ಲಿರುವ ಎಲ್ಲಾ ಮದ್ರಸಾಗಳನ್ನು ಮುಚ್ಚುವುದಾಗಿ ಹೇಳಿರುವ ಶರ್ಮಾ, “ಮುಸ್ಲಿಂ ಸಮುದಾಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರು ಹಾಗೂ ಇಂಜಿನಿಯರ್‌ಗಳನ್ನು ಪಡೆಯಲು ನಾನು ನೋಡುತ್ತಿದ್ದೇನೆ,” ಎಂದಿದ್ದಾರೆ.
ಇದೇ ಜುಲೈನಲ್ಲಿ ಹಿಂದುತ್ವದ ಬಗ್ಗೆ ಮತ್ತೊಂದು ಹೇಳಿಕೆ ಕೊಟ್ಟಿದ್ದ ಶರ್ಮಾ, “ಹಿಂದುತ್ವ 5000 ವರ್ಷಗಳ ಹಿಂದೆಯೇ ಆರಂಭಗೊಂಡಿದ್ದು, ಅದೊಂದು ಜೀವನದ ಪಥವಾಗಿದೆ. ಬಹುತೇಕ ಧರ್ಮಗಳ ಪಾಲಕರು ಹಿಂದೂಗಳ ಸಂತತಿಯವರೇ ಆಗಿದ್ದಾರೆ,” ಎಂದಿದ್ದರು.