ನವದೆಹಲಿ: ಭಾರತೀಯ ಯೋಧರಿಗೆ ಹವಾಮಾನಕ್ಕೆ ಪೂರಕವಾದ ಹೊಸ ಸಮವಸ್ತ್ರವನ್ನು ನೀಡಲಿದ್ದು, ಮುಂದಿನ ವರ್ಷದಿಂದ ಜಾರಿಗೊಳಿಸುವ ಸಾಧ್ಯತೆ ಇದೆ.
ಡಿಜಿಟಲ್ ಕಣ್ಗಾವಲಿಗೆ ಸುಲಭವಾಗಿ ಗೊತ್ತಾಗದ ಮತ್ತು ಮೇಲ್ನೋಟಕ್ಕೆ ಸೇನಾ ಸಿಬ್ಬಂದಿ ಇರುವುದನ್ನು ಗುರುತಿಸಲಾಗದ ರೀತಿಯಲ್ಲಿ ಸಮವಸ್ತ್ರ ಇರಲಿದೆ. ಮಣ್ಣು ಮತ್ತು ಹಸಿರು ಬಣ್ಣದಿಂದ ಕೂಡಿದ ಹವಾಮಾನ ಏರಿಳಿತವನ್ನು ಎದುರಿಸಲು ಪೂರಕವಾದ ಹೊಸ ಸಮವಸ್ತ್ರಗಳನ್ನು ಸೈನಿಕರು ಕಾರ್ಯನಿರ್ವಹಿಸುವ ಭೌಗೋಳಿಕ ಸ್ವರೂಪಕ್ಕೆ ಅನುಗುಣವಾಗಿ ರೂಪಿಸಲಾಗಿದೆ.
ಹವಾಮಾನ ಬದಲಾವಣೆಗೆ ಪೂರಕವಾಗಿ ಮತ್ತು ಭೌಗೋಳಿಕ ಸ್ವರೂಪಕ್ಕೆ ಅನುಗುಣವಾಗಿ ಸೈನಿಕರನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗದಂತಹ ಸಮವಸ್ತ್ರಗಳನ್ನು ರೂಪಿಸಲಾಗಿದ್ದು, ಜನವರಿ 15ರಂದು ಸೇನಾ ದಿನದ ಪಥಸಂಚಲನದಲ್ಲಿ ಈ ವಿಶೇಷ ಸಮವಸ್ತ್ರ ಪ್ರದರ್ಶಿಸುವ ಸಾಧ್ಯತೆ ಇದೆ.
ಅನೇಕ ದೇಶಗಳ ಸೇನೆಯ ಸಮವಸ್ತ್ರ ಪರಿಶೀಲನೆ, ವಿಶ್ಲೇಷಣೆಯ ನಂತರ ವಿಶೇಷ ಸಮವಸ್ತ್ರವನ್ನು ಅಂತಿಮಗೊಳಿಸಲಾಗಿದ್ದು, ಇದು ಬೇಸಿಗೆ, ಚಳಿಗಾಲಕ್ಕೆ ಪೂರಕವಾಗಿದೆ. ಹೆಚ್ಚು ಬಾಳಿಕೆಯ ಸಮವಸ್ತ್ರ ಡಿಜಿಟಲ್ ಕಣ್ಗಾವಲಿಗೆ ಕೂಡ ಸುಲಭವಾಗಿ ನಿಲುಕುವುದಿಲ್ಲ. ಮೇಲ್ನೋಟಕ್ಕೆ ಸೇನೆ ಸಿಬ್ಬಂದಿಯನ್ನು ಗುರುತಿಸಲು ಆಗುವುದಿಲ್ಲ. ಅಂತಹ ವಿಶೇಷ ಸಮವಸ್ತ್ರ ಇದಾಗಿದೆ ಎನ್ನಲಾಗಿದೆ.