ದಾವಣಗೆರೆ: ಕೊರೋನಾ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದ 10 ಕ್ಕೂ ಹೆಚ್ಚು ಮನೆಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ ಘಟನೆ ನಡೆದಿದೆ.
ಸಾಸ್ವೆಹಳ್ಳಿ ಹೊಸಹಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರ ಕುಟುಂಬ ಕೋವಿಡ್ ಲಸಿಕೆ ಪಡೆಯಲು ನಿರಾಕರಿಸಿದ್ದು, ಈ ಕುಟುಂಬವು ಸೇರಿದಂತೆ ಒಟ್ಟು 10 ಕುಟುಂಬಗಳ ಮನೆಯ ವಿದ್ಯುತ್ ಸಂಪರ್ಕವನ್ನು ಉಪತಹಶೀಲ್ದಾರ್ ಕಡಿತಗೊಳಿಸುವಂತೆ ಸೂಚನೆ ನೀಡಿ, ಲಸಿಕೆ ಹಾಕಿಸಿಕೊಳ್ಳಲು ಮನವೊಲಿಸಿದ್ದಾರೆ.
ಆರೋಗ್ಯ ಇಲಾಖೆ ಸಿಬ್ಬಂದಿ, ಅಧಿಕಾರಿಗಳು ಮನೆಬಾಗಿಲಿಗೆ ಬಂದು ಕೋವಿಡ್ ಲಸಿಕೆ ಹಾಕಿಕೊಳ್ಳುವಂತೆ ಮನವಿ ಮಾಡಿದರೂ ಕುಟುಂಬದವರು ಲಸಿಕೆ ಹಾಕಿಸಿಕೊಂಡಿರಲಿಲ್ಲ. ನಂತರ ಉಪತಹಶೀಲ್ದಾರ್ ಅವರು ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಎಚ್ಚರಿಕೆ ನೀಡಿದ್ದಲ್ಲದೇ ಲಸಿಕೆ ಹಾಕಿಸಿಕೊಳ್ಳುವಂತೆ ಕುಟುಂಬದವರ ಮನವೊಲಿಸಿದ್ದಾರೆ. ಲಸಿಕೆ ನೀಡಿದ ನಂತರ ಆ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ ಎಂದು ಹೇಳಲಾಗಿದೆ.