ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ರಾಜ್ಯ ರಾಜಕೀಯದಲ್ಲಿ ಹಲವು ಊಹಾಪೋಹಗಳು ಹರಿದಾಡುತ್ತಿವೆ. ವಿಧಾನ ಪರಿಷತ್ ಚುನಾವಣೆಗೂ ಮುನ್ನ ನಡೆದಿರುವ ಈ ಭೇಟಿಯಿಂದ ಜೆಡಿಎಸ್, ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲಿದೆಯಾ ಎಂಬ ಅನುಮಾನಕ್ಕೆ ಕಾರಣವಾಗಿದೆ.
ನರೇಂದ್ರ ಮೋದಿಯವರೊಂದಿಗಿನ ದೇವೇಗೌಡರ ಭೇಟಿ ಬಳಿಕ ರಾಜ್ಯ ಕಾಂಗ್ರೆಸ್ ನ ಕೆಲ ನಾಯಕರು ಟೀಕೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಎಚ್.ಡಿ. ದೇವೇಗೌಡರು, ನರೇಂದ್ರ ಮೋದಿ ಅವರನ್ನು ನಾನು ಹಲವಾರು ಬಾರಿ ಭೇಟಿ ಮಾಡಿದ್ದೇನೆ. ಮೋದಿಯವರನ್ನು ಭೇಟಿಯಾಗಲು ಸಿದ್ದರಾಮಯ್ಯನ ಅನುಮತಿ ಪಡೆಯಬೇಕಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳ ಗ್ರಾಮದಲ್ಲಿ ಮಾತನಾಡಿದ ದೇವೇಗೌಡರು, ಜೆಡಿಎಸ್ ಬಿಜೆಪಿಯ ಬಿ ಟೀಂ ಅಲ್ಲ. ವಿಧಾನಪರಿಷತ್ ಚುನಾವಣೆಯಲ್ಲಿ ನಾವೂ ಕಣಕ್ಕಿಳಿದು ಬಿಜೆಪಿ, ಕಾಂಗ್ರೆಸ್ ನಂತೆ ಹೋರಾಡುತ್ತಿದ್ದೇವೆ ಎಂದು ಹೇಳಿದ್ದಾರೆ.