ದೇಶದಲ್ಲಿ ಘಟಿಸುವ ಬಹಳಷ್ಟು ಅಪಘಾತಗಳು ಚಾಲಕರು ದಣಿದಾಗ ಹಾಗೂ ನಿದ್ರೆ ಕಳೆದುಕೊಂಡ ವೇಳೆ ಸಂಭವಿಸುತ್ತವೆ. ರಾತ್ರಿ ಹಾಗೂ ಮುಂಜಾನೆಯ ನಡುವಿನ ಅವಧಿಯಲ್ಲಿ ಹೀಗೆ ಆಗುವ ಸಂಭವಗಳು ಬಹಳ ಇರುತ್ತವೆ.
ಇಂಥ ಸವಾಲಿಗೆ ಪರಿಹಾರ ಹುಡುಕಲು ಹೊರಟ ಕೋಲ್ಕತ್ತಾದ ಸಂಚಾರಿ ಪೊಲೀಸರು ಲಾರಿ ಚಾಲಕರಿಗೆ ಚಹಾ ವಿತರಿಸುವ ಮೂಲಕ ಸುರಕ್ಷಿತ ವಾಹನ ಚಾಲನೆಯ ಕುರಿತು ಅರಿವು ಮೂಡಿಸಲು ಮುಂದಾಗಿದ್ದಾರೆ.
ಮೃತ ದೇಹವೊಂದನ್ನು ಒಯ್ಯುತ್ತಿದ್ದ ಲಾರಿಯೊಂದು ಕಲ್ಲಿನ ಲೋಡ್ ಇದ್ದ ಲಾರಿಗೆ ಗುದ್ದಿದ ಪರಿಣಾಮ 18 ಮಂದಿ ಮೃತಪಟ್ಟು ಅನೇಕರು ಗಾಯಗೊಂಡ ಬಳಿಕ ಪೊಲೀಸರು ಹೀಗೊಂದು ಅಭಿಯಾನಕ್ಕೆ ಮುಂದಾಗಿದ್ದಾರೆ. ಮೊದಲಿಗೆ ಚಾಲಕ ಕುಡಿತದ ಅಮಲಿನಲ್ಲಿ ವಾಹನ ಚಾಲನೆ ಮಾಡಿರಬಹುದು ಎಂದು ಶಂಕಿಸಲಾಗಿತ್ತಾದರೂ, ಪೋಸ್ಟ್ ಮಾರ್ಟಂ ವರದಿಯಲ್ಲಿ ಆತನ ದೇಹದಲ್ಲಿ ಆಲ್ಕೋಹಾಲ್ ಇರಲಿಲ್ಲ ಎಂದು ತಿಳಿದು ಬಂದಿದೆ.
“ಚಾಲಕ ಮೃತಪಟ್ಟ ಕಾರಣ ರಾತ್ರಿ ಏನಾಯಿತು ಎಂದು ಸ್ಪಷ್ಟವಾಗಿ ತಿಳಿಯುವುದು ಅಸಾಧ್ಯ. ಆದರೆ ನಮ್ಮ ಅನುಭವದಿಂದ ಹೇಳುವುದಾದರೆ ವಾಹನ ಚಾಲನೆ ಮಾಡಿದ ಸಂದರ್ಭದಲ್ಲಿ ಚಾಲಕ ನಿದ್ರೆ ಮಾಡಿದ್ದ ಸಾಧ್ಯತೆ ಇದೆ ಎನ್ನಬಹುದು. ಚಾಲಕರು ದಣಿದಿರುವ ವೇಳೆ ಹೆದ್ದಾರಿಯಲ್ಲಿ ಚಾಲನೆ ಮಾಡುವಾಗ ಹೀಗೆ ಆಗುವ ಸಾಧ್ಯತೆ ಇರುತ್ತದೆ. ಬಹುತೇಕ ಪ್ರಕರಣಗಳಲ್ಲಿ ಅವರು ಇಡೀ ರಾತ್ರಿ ಚಾಲನೆ ಮಾಡುತ್ತಾರೆ ಹಾಗೂ ಕೆಲವೊಮ್ಮೆ ನಿದ್ರೆ ಮಾಡುವಂತೆ ಆಗುತ್ತದೆ. ಆಯಾಸ ಅವರ ಅತಿ ದೊಡ್ಡ ಶತ್ರು,” ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಹೀಗೆ ಆಯಾಸಗೊಂಡ ಕೈಗಳಿಗೆ ಮರುಚೈತನ್ಯ ತುಂಬುವ ಯತ್ನವೊಂದರಲ್ಲಿ ಕೋಲ್ಕತ್ತಾ ಪೊಲೀಸರು ಚಹಾ ನೀಡುವ ಅಭಿಯಾನಕ್ಕೆ ಮುಂದಾಗಿದ್ದಾರೆ.
“ಕೆಲವೊಮ್ಮೆ ಲಾರಿ ಚಾಲಕರು ಪತ್ರಗಳ ಪರಿಶೀಲನೆಗೆ ವಾಹನ ನಿಲ್ಲಿಸಬೇಕಾಗುತ್ತದೆ. ಆ ವೇಳೆ ಅವರಿಗೆ ಸ್ವಲ್ಪ ಕಾಲಾವಕಾಶವಿರುತ್ತದೆ. ಈ ಅವಧಿಯಲ್ಲಿ ಅವರು ಸ್ವಲ್ಪ ಚಹಾ ತೆಗೆದುಕೊಳ್ಳಬಹುದು. ನಾವು ಅವರ ಪತ್ರಗಳನ್ನು ಪರಿಶೀಲಿಸುವ ವೇಳೆ ಅವರಿಗೆ ಸ್ವಲ್ಪ ಚಹಾ ನೀಡಲು ನಿರ್ಧರಿಸಿದ್ದೇವೆ. ಇದೊಂದು ಸ್ವಾಗತಾರ್ಹ ಬೆಳವಣಿಗೆ ಮಾತ್ರವಲ್ಲದೇ, ಚಾಲಕರ ಹಾಗೂ ಇತರೆ ಜನರ ಸುರಕ್ಷತೆಯ ದೃಷ್ಟಿಯಿಂದಲೂ ಮುಖ್ಯವಾಗಿದೆ,” ಎನ್ನುತ್ತಾರೆ ಕೋಲ್ಕತ್ತಾ ಪೊಲೀಸ್ನ ಹಿರಿಯ ಅಧಿಕಾರಿ.