ಅಗ್ರಾ: ಆಟೋ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದು, ಚಿನ್ನಾಭರಣ ಮತ್ತು 75 ಸಾವಿರ ರೂಪಾಯಿ ನಗದು ಇದ್ದ ಬ್ಯಾಗ್ ಅನ್ನು ವಾರಸುದಾರರಿಗೆ ಮರಳಿಸಿದ್ದಾರೆ.
ಆಗ್ರಾದ ಕ್ಯಾಂಟ್ ರೈಲ್ವೆ ನಿಲ್ದಾಣದ ಗೇಟ್ ನಲ್ಲಿ ಪ್ರಯಾಣಿಕರೊಬ್ಬರು ಮರೆತುಹೋಗಿದ್ದ ಬ್ಯಾಗ್ ಅನ್ನು ಮಾಲೀಕರಿಗೆ ಹಿಂತಿರುಗಿಸಲಾಗಿದೆ. ಬುಧವಾರ ಘಟನೆ ನಡೆದಿದೆ.
ಆಟೋ ಚಾಲಕ ವಿನೋದ್ ಯಾದವ್ ತಮ್ಮ ಆಟೋದಲ್ಲಿ ಪ್ರಯಾಣಿಕರು ಮರೆತುಹೋಗಿದ್ದ ಬ್ಯಾಗ್ ಗಮನಿಸಿ ಅದನ್ನು ರೈಲ್ವೆ ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ. ಬ್ಯಾಗ್ ನಲ್ಲಿ ಒಂದು ಜೊತೆ ಚಿನ್ನದ ಉಂಗುರ, ಬಳೆ, ಕಾಲುಂಗುರ, ಬಟ್ಟೆಗಳು ಹಾಗೂ 75 ಸಾವಿರ ರೂಪಾಯಿ ನಗದು ಇರುವುದನ್ನು ಗಮನಿಸಿದ ಪೊಲೀಸರು ಮಾಲೀಕನ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
ಸಬ್ ಇನ್ಸ್ ಪೆಕ್ಟರ್ ಸುಶೀಲ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ಹತ್ರಾಸ್ ಜಿಲ್ಲೆಯ ಮುರ್ಸಾನ್ ನ ನಿವಾಸಿ ಬಿರಿ ಸಿಂಗ್ ಭೋಪಾಲ್‌ನಿಂದ ಶ್ರೀಧಾಮ್ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲಿನಲ್ಲಿ ಆಗ್ರಾ ಕ್ಯಾಂಟ್ ನಲ್ಲಿ ಇಳಿದರು. ಆಟೋದಲ್ಲೇ ತಮ್ಮ ಬ್ಯಾಗ್ ಮರೆತು ಹೋಗಿದ್ದು, ಬ್ಯಾಗ್ ನಲ್ಲಿದ್ದ ಸಂಪರ್ಕ ಸಂಖ್ಯೆಯ ಮೂಲಕ ಸಿಂಗ್ ಅವರನ್ನು ಪತ್ತೆ ಹಚ್ಚಲಾಯಿತು. ಅವರನ್ನು ಠಾಣೆಗೆ ಕರೆಸಿ ಕಾರ್ಯವಿಧಾನ ಪೂರ್ಣಗೊಳಿಸಿ ಬ್ಯಾಗ್ ಅವರಿಗೆ ಹಸ್ತಾಂತರಿಸಲಾಯಿತು ಎಂದು ಹೇಳಿದ್ದಾರೆ.
ಆಟೋ ಚಾಲಕ ವಿನೋದ್ ಕುಮಾರ್ ಯಾದವ್ ಅವರ ಪ್ರಾಮಾಣಿಕತೆಗೆ ಬಿರಿ ಸಿಂಗ್ ಧನ್ಯವಾದ ಹೇಳಿದ್ದಾರೆ.