ನವದೆಹಲಿ: ಸಾರ್ವಜನಿಕ ವಲಯದ ಬ್ಯಾಂಕ್ಗಳನ್ನು ಖಾಸಗೀಕರಣಗೊಳಿಸುವ ಕೇಂದ್ರದ ಯೋಜನೆಯನ್ನು ವಿರೋಧಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್(ಯುಎಫ್ಬಿಯು) ಡಿಸೆಂಬರ್ 16 ರಿಂದ ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿದೆ.
ಬ್ಯಾಂಕ್ಗಳ ಖಾಸಗೀಕರಣದ ಆಲೋಚನೆಯನ್ನು ಸರ್ಕಾರ ಕೈಬಿಡದಿದ್ದರೆ ಎರಡು ದಿನಗಳ ಮುಷ್ಕರದ ಜೊತೆಗೆ ಇತರ ಸರಣಿ ಆಂದೋಲನ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ (ಎಐಬಿಒಸಿ) ಪ್ರಧಾನ ಕಾರ್ಯದರ್ಶಿ ಸಂಜಯ್ ದಾಸ್ ಹೇಳಿದ್ದಾರೆ.
2021ರ ಬಜೆಟ್ ಭಾಷಣದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಪ್ರಸಕ್ತ ಹಣಕಾಸು ವರ್ಷದಲ್ಲಿ ಎರಡು ಸಾರ್ವಜನಿಕ ವಲಯದ ಬ್ಯಾಂಕ್ಗಳನ್ನು ಖಾಸಗೀಕರಣಗೊಳಿಸಲಾಗುವುದು ಎಂದು ಹೇಳಿದ್ದರು.
ಪಿ.ಎಸ್.ಬಿ.ಗಳನ್ನು ಖಾಸಗೀಕರಣಗೊಳಿಸುವ ಈ ಕ್ರಮವು ಆರ್ಥಿಕತೆಯ ಆದ್ಯತೆಯ ವಲಯಗಳಿಗೆ ಹಾನಿ ಮಾಡುತ್ತದೆ. ಸ್ವ-ಸಹಾಯ ಗುಂಪುಗಳಿಗೆ ಮತ್ತು ಗ್ರಾಮೀಣ ಆರ್ಥಿಕತೆಗೆ ಸಾಲದ ಹರಿವನ್ನು ನೀಡುತ್ತದೆ ಎಂದು ದಾಸ್ ತಿಳಿಸಿದ್ದು, ಉದ್ದೇಶಿತ ಕ್ರಮವು ಉತ್ತಮ ಆರ್ಥಿಕ ತರ್ಕವನ್ನು ಆಧರಿಸಿಲ್ಲ. ಆದರೆ, ಬ್ಯಾಂಕುಗಳನ್ನು ಬಂಡವಾಳಶಾಹಿಗಳಿಗೆ ಹಸ್ತಾಂತರಿಸುವ ರಾಜಕೀಯ ನಿರ್ಧಾರವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ದೇಶದ ಒಟ್ಟು ಠೇವಣಿಗಳಲ್ಲಿ ಶೇಕಡ 70 ರಷ್ಟು ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿದ್ದು, ಅವುಗಳನ್ನು ಖಾಸಗಿ ಬಂಡವಾಳಕ್ಕೆ ಹಸ್ತಾಂತರಿಸುವುದರಿಂದ ಈ ಬ್ಯಾಂಕ್ಗಳಲ್ಲಿ ಠೇವಣಿ ಇಟ್ಟಿರುವ ಸಾಮಾನ್ಯ ಜನರ ಹಣ ಅಪಾಯಕ್ಕೆ ಸಿಲುಕಿಸುತ್ತದೆ ಎನ್ನಲಾಗಿದೆ.