ಉಪ ಚುನಾವಣೆಯ ಗೆಲುವಿನಿಂದ ಬೀಗುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಈಗ ಮೇಲ್ಮನೆ ಚುನಾವಣೆಗೂ ಮುನ್ನ ಮತ್ತೊಂದು ಶಾಕ್ ಎದುರಾಗಿದೆ. ಉಪ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್, ಬಿಜೆಪಿಯ ಬಿ ಟೀಂ ಎಂದು ಹೇಳುತ್ತಿದ್ದ ಕಾಂಗ್ರೆಸ್ ನಾಯಕರಿಗೆ ಈಗ ಮೇಲ್ಮನೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಸೂಚನೆ ಸಿಕ್ಕಿರುವ ಹಿನ್ನೆಲೆಯಲ್ಲಿ ತಂತ್ರಗಾರಿಕೆಯನ್ನು ಬದಲು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಸಹ ಸ್ಪರ್ಧೆಗಿಳಿಯುವ ಕಾರಣ ಮತ ವಿಭಜನೆಯಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಪೂರಕ ವಾತಾವರಣ ಸೃಷ್ಟಿಯಾಗಬಹುದೆಂಬ ಲೆಕ್ಕಾಚಾರ ಹೊಂದಿದ್ದ ಕಾಂಗ್ರೆಸ್ಸಿಗರಿಗೆ ಈಗ ಜೆಡಿಎಸ್ – ಬಿಜೆಪಿ ಮೈತ್ರಿಯಾದರೆ ಅದು ಚುನಾವಣೆ ಮೇಲೆ ಪರಿಣಾಮ ಬೀರಬಹುದೆಂಬ ಆತಂಕ ಕಾಡುತ್ತಿದೆ.
ಇಂದು ಅಥವಾ ನಾಳೆ ಒಳಗಾಗಿ ಬಿಜೆಪಿ – ಜೆಡಿಎಸ್ ಮೈತ್ರಿ ಕುರಿತು ಅಂತಿಮ ನಿರ್ಧಾರ ಹೊರಬೀಳಲಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಇದಾದ ಬಳಿಕ ಒಂದು ಸ್ಪಷ್ಟ ಚಿತ್ರಣ ಸಿಗಲಿದೆ.