ಬೆಳಗಾವಿ: ಪರಿಷತ್ ಚುನಾವಣೆ ಫಲಿತಾಂಶದ ದಿನ ಡಿ.14ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪ್ರತಿ ಶಬ್ಧಕ್ಕೂ ಉತ್ತರ ಸಿಗಲಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ಡಿ.ಕೆ.ಶಿವಕುಮಾರ್ ಅವರ ಪ್ರತಿ ಶಬ್ಧಕ್ಕೂ ಕಠೋರವಾಗಿ ಉತ್ತರ ಕೊಡ್ತೀನಿ. ಆದರೆ ಈಗಲ್ಲ, ವಿಧಾನಪರಿಷತ್ ಚುನಾವಣೆಯ ಫಲಿತಾಂಶದ ದಿನದಂದು. ನಮ್ಮ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಗೆಲ್ಲಬೇಕು. ಈ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ ಎಂದರು.
ಡಿ.ಕೆ.ಶಿವಕುಮಾರ್ ಕುಟುಂಬ ಏನಿತ್ತು? ಜಾರಕಿಹೊಳಿ ಕುಟುಂಬ ಏನಿತ್ತು ಎಲ್ಲಾ ಬಹಿರಂಗ ಮಾಡುತ್ತೇನೆ. 1985ರಿಂದ ಇಲ್ಲಿಯವರೆಗೂ ನಡೆದ ಎಲ್ಲಾ ವಿಚಾರ ಬಹಿರಂಗ ಮಾಡುತ್ತೇನೆ. ನನ್ನ ವ್ಯಕ್ತಿತ್ವ ಏನು? ಡಿಕೆಶಿ ವ್ಯಕ್ತಿತ್ವ ಏನು? ಎಂಬುದನ್ನೂ ಹೇಳುತ್ತೇನೆ. ಇಬ್ಬರ ನಡುವೆಯೂ ಒಪನ್ ವಾರ್ ನಡೆಯಲಿ ಎಂದು ಹೇಳಿದರು.
ದೆಹಲಿ ವರಿಷ್ಠರ ಆಶಿರ್ವಾದ ನನ್ನ ಮೇಲಿದೆ. ದೆಹಲಿ ವರಿಷ್ಠರಿಂದಾಗಿ ನಾನು ಜೀವಂತವಾಗಿದ್ದೇನೆ. ಇಲ್ಲದಿದ್ದರೆ ಇಷ್ಟೊತ್ತಿಗೆ ಷಡ್ಯಂತ್ರ ಮಾಡಿ ನನ್ನನ್ನು ಮುಗಿಸುತ್ತಿದ್ದರು. ಸಂಘ ಪರಿವಾರದ ನಾಯಕರ ಬೆಂಬಲದಿಂದ ನಾಯಕನಾಗಿದ್ದೇನೆ. ಬ್ಲ್ಯಾಕ್ ಮೇಲ್ ಯಾರು ಮಾಡ್ತಿದ್ದಾರೆ ಎಂಬುದು ಡಿ.14ರಂದು ಗೊತ್ತಾಗುತ್ತೆ ಎಂದು ತಿಳಿಸಿದರು.