ದೇಶದಲ್ಲಿ ಜನವರಿ ಒಂದರಿಂದ ಆನ್ಲೈನ್ ಪಾವತಿ ವಿಧಾನ ಬದಲಾಗಲಿದೆ. ಇದಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗಸೂಚಿಯನ್ನು ಹೊರಡಿಸಿದೆ. ಆರ್.ಬಿ.ಐ. ಮಾರ್ಗಸೂಚಿ ಅನುಸರಿಸಿರುವ, ಗೂಗಲ್, ಆನ್ಲೈನ್ ಪಾವತಿ ವಿಧಾನದಲ್ಲಿ ಬದಲಾವಣೆ ಮಾಡ್ತಿದೆ.
ಗೂಗಲ್ ಮೂಲಕ ಹಣ ಪಾವತಿ ಮಾಡುವ ವೇಳೆ ಸಾಕಷ್ಟು ಬದಲಾವಣೆಯಾಗಲಿದೆ. ಇಷ್ಟು ದಿನ ಕಾರ್ಡ್ ಮುಕ್ತಾಯದ ದಿನ ಹಾಗೂ ಕಾರ್ಡ್ ವಿವರ ಗೂಗಲ್ ನಲ್ಲಿ ಉಳಿದಿರುತ್ತಿತ್ತು. ಗ್ರಾಹಕರು ಅದನ್ನು ನಮೂದಿಸದೇ ಹಣ ವರ್ಗಾವಣೆ ಮಾಡುತ್ತಿದ್ದರು. ಆದ್ರೆ ಜನವರಿ ಒಂದರಿಂದ ಆನ್ಲೈನ್ ಪಾವತಿ ಮಾಡುವಾಗ, ಡೆಬಿಟ್-ಕ್ರೆಡಿಟ್ ಕಾರ್ಡ್ ಸಂಖ್ಯೆ, ಮುಕ್ತಾಯ ದಿನಾಂಕ ಮತ್ತು ಇತರ ಮಾಹಿತಿಯನ್ನು ನಮೂದಿಸಬೇಕಾಗುತ್ತದೆ. ಈ ಮಾಹಿತಿ ನೀಡದೆ ಹೋದಲ್ಲಿ ಹಣ ವರ್ಗಾವಣೆಯಾಗುವುದಿಲ್ಲ.
ಈ ಹಿಂದೆ ಸಿವಿವಿ ಮಾತ್ರ ನಮೂದಿಸಿದರೆ ಸಾಕಾಗಿತ್ತು. ಉಳಿದ ಮಾಹಿತಿ ಗೂಗಲ್ ಬಳಿ ಇರುತ್ತಿತ್ತು. ಡೇಟಾ ಸುರಕ್ಷತೆ ಅಪಾಯಕಾರಿ ಎಂಬ ಕಾರಣಕ್ಕೆ ಈಗ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
Discover, Diners, RuPay ಅಥವಾ American Express ಕಾರ್ಡ್ ಬಳಸಿದರೆ, ಜನವರಿ ಒಂದರಿಂದ ಹಸ್ತಚಾಲಿತ ಆನ್ಲೈನ್ ಪಾವತಿಗೆ ಪ್ರತಿ ಬಾರಿ ಕಾರ್ಡ್ ಮಾಹಿತಿಯನ್ನು ನಮೂದಿಸಬೇಕಾಗುತ್ತದೆ. ಆರ್.ಬಿ.ಐ. ಹೊಸ ಮಾರ್ಗಸೂಚಿ ಗೂಗಲ್ ಪ್ಲೇ ಸ್ಟೋರ್, ಯುಟ್ಯೂಬ್, ಗೂಗಲ್ ಜಾಹೀರಾತುಗಳಂತಹ ಎಲ್ಲಾ ಪಾವತಿ ಸೇವೆಗಳ ಮೇಲೆ ಪರಿಣಾಮ ಬೀರಲಿದೆ.